ಊರ್ಣನಾಭಾವತಾರ

ಹೆಚ್ಟಿಯೆಮ್ಮೆಲ್ಲುಗಳಲ್ಲಿ

ಹೊರಳಾಡಿ

ಹೈರಾಣಾದ ಮನ

ತಣಿಯದೆ

ತಿರುಗುವಾಗ

ಥಟ್ಟನೆ ನೆನಪಾಯ್ತು

ಹಾಲ್ಗಡಲು

ಹಾವಸೆ

ಕೆಳಗೆ ಮಿಸುಕಿದ

ಆದಿಜೇಡ

(ಲಿಂಕುಗಳ ಕ್ಲಿಕ್ಕಿಸುತ್ತ ಅಂತರಜಾಲದಲ್ಲಿ ಕಳೆದು ಹೋಗಿದ್ದಾಗ ಥಟ್ಟನೆ  ನೆನಪಾಗಿತ್ತು ಗೋಕಾಕರ ಕವನ, ಊರ್ಣನಾಭಾವಾತಾರ. ಆಗಲೇ ಯಾವಾಗಲೋ ಇದನ್ನು ಬರೆದಿಟ್ಟದ್ದು ಹಾಗೆ ಡ್ರಾಫ್ತಿನಲ್ಲಿ ಉಳಿದು ಬಿಟ್ಟಿತ್ತು. ಈಗ ಡ್ರಾಫ್ಟುಗಳಲ್ಲಿ ಉಳಿದವಕ್ಕೆ ಬೆಳಕು ಕಾಣಿಸುವ ಉಮೇದು. ಒಮ್ಮೆ ಪೋಸ್ಟ್ ಮಾಡುವ ತನಕ ಇವು ತಲೆಯಲ್ಲೇ ಸುತ್ತುತ್ತಿರುತ್ತವೆ. ಅದರಿಂದ ಬಿಡುಗಡೆ ಅಂದರೆ ಪೋಸ್ಟ್ ಮಾಡುವದು!

ಇವತ್ತು ಮತ್ತೊಮ್ಮೆ ಓದಿ, ಒಂದಷ್ಟು ತಿದ್ದಿ ಪೋಸ್ಟಿಸುತ್ತಿರುವೆ; ಗೋಕಾಕರ ಈ ಪದ್ಯದ ಪರಿಚಯವನ್ನು ಮಾಡಿಕೊಟ್ಟ ಪ್ರಭು ಮೂರ್ತಿ ಅವರಿಗೆ ಧನ್ಯವಾದಗಳನ್ನು ತಿಳಿಸುತ್ತ…)

ಕೆಲಸವಾದ ಬಳಿಕ

ಬಂದ ಕೆಲಸವಾದ ಬಳಿಕ ಉಳಿಯಬಾರದು
ಬಂದ ಕೆಲಸವಾದ ಬಳಿಕ ಉಳಿಯಲಾಗದು

ಕೆಲಸವೊಂದು ಕೈಯಲಿರಲು
ಹಲವು ಹೊಸತನೆತ್ತಿಕೊಂಡು
ಹಳತು ಹೊಸತು ಮಿಳಿಸಿಕೊಂಡು
ನಾಳೆ ಫಸಲನೆಣಿಸಿ ಗುಣಿಸಿ

ಕಳೆದ ಕಾಲ ಸಾರ್ಥವಾಯ್ತ
ಕಲಿತ ಮಾತು ಅರ್ಥವಾಯ್ತ
ತಿಳಿದ ತಿಳಿವು ತೀರ್ಥವಾಯ್ತ
ಫಲಿತವಾಯ್ತ ಪತಿತವಾಯ್ತ

ಪೂರ್ಣವವನ ಗಣಿತ ಪೂರ್ಣ
ಪೂರ್ಣವುಸಿರಿನಾಟ ಪೂರ್ಣ
ಪೂರ್ಣಗೊಳ್ಳದಿದ್ದಪೂರ್ಣ
ಪೂರ್ಣಗೀಯಲೆಲ್ಲ ಪೂರ್ಣ

ಯತ್ಕೃತಮ್ ತು ಮಯಾ ದೇವ
ಪರಿಪೂರ್ಣಮ್ ತದಸ್ತು ಮೇ

‘ಕೆಲಸ ಆದ ಕೂಡ್ಲೆ ಎದ್ದು ಬಿಡೋದನ್ನ ನಮ್ಮಪ್ಪ ಮತ್ತ ನಮ್ಮಣ್ಣ ಯಾವಾಗಲೂ ಪಾಲಸ್ತಾರ’ ಅಂತ ನನ್ನಪ್ಪ ಎಷ್ಟೋ ಬಾರಿ ಹೇಳಿದ್ದಾರೆ. ಅದಕ್ಕೆ ತಕ್ಕಂತೆ ‘ಕೆಲಸಾದ ಕೂಡ್ಲೆ ಜಾಗ ಬಿಟ್ಬಿಡ್ತೀನಿ’ ಅಂತ ದೊಡ್ಡಪ್ಪನೇ ಹೇಳಿದ್ದಾರೆ ಮತ್ತು ಅದರಂತೆ ಮಾಡ್ತಾರೆ. ‘ನಮ್ಮದೇನ ಕೆಲಸದ ಅಲ್ಲೆ. ನೀವು ಹೋಗಿ ಬರ್ರಿ’ ಅಂತ  ಹೇಳಿ ಮನೆಯಲ್ಲೇ ಉಳಿಯುತ್ತಿದ್ದ ತಾತನ ನೆನಪೂ ಇದೆ.

ಇಂಟರ್ನೆಟ್ಟನ್ನೋ ಜಗತ್ತಿನ ಕಿಟಕಿ ಮೂಲಕ ನನ್ನ ಆಫೀಸಿನ ಕೆಲಸವೂ ಆಗ್ತದೆ ಮತ್ತು ಏನೆಲ್ಲ ವಿಷಯಗಳ ಬಗ್ಗೆ ತಿಳಿದುಕೊಳ್ಳಲಿಕ್ಕೂ ಆಗ್ತದೆ. ಮನಸ್ಸು ಪಾತರಗಿತ್ತಿಯಂತೆ ಹಾರಿಕೊಂಡೆ ಇರಬಹುದು. ಅಂತ್ಯ ಪಾರವಿಲ್ಲದ  ಲೋಕದೊಳಗೆ ಕಳೆದು ಹೋಗುವದು ಬಹಳ ಸುಲಭ. ಒಂದು ಕೆಲಸ ಮಾಡಿ ಮುಗಿಸುವ ಮುನ್ನವೇ ಮನಸ್ಸು ಮುಂದಿನ ಹತ್ತು ಕೆಲಸಗಳ ಬಗ್ಗೆ ಯೋಚಿಸುತ್ತಿರುತ್ತದೆ. ಎಷ್ಟೋ ಸಾರಿ ಇಲ್ಲಿಂದ ಯಾವಾಗಲೋ ಅಲ್ಲಿ ಹಾರಿಹೋಗಿ ಆ ಕೆಲಸವನ್ನೇ ಆರಂಭಿಸಿಬಿಟ್ಟಿರುತ್ತದೆ. ಅಥವಾ ಒಮ್ಮೊಮ್ಮೆ, ಮಾಡಬೇಕಾದ ಕೆಲಸ, ಒಪ್ಪಿಕೊಂಡ ಕೆಲಸ, ತಪ್ಪಿಸಿಕೊಳ್ಳಲಾಗದೆ ಒಪ್ಪಿಕೊಂಡ ಕೆಲಸ, ಮಾಡಬೇಕು ಎಂದುಕೊಂಡ ಕೆಲಸ, ಓದಬೇಕು ಎಂದುಕೊಂಡ ಪುಸ್ತಕ, ಬ್ಲಾಗು, ಬರವಣಿಗೆ, ಧುತ್ತನೆ ಎದುರಾದ ಕೆಲಸ, ಎಲ್ಲವೂ ಗಾಳಿಯಲ್ಲಿ ಹಾರಿಸಿದ ಚಂಡುಗಳು ಒಟ್ಟಿಗೆ ಕೆಳಗಿಳಿದು ಬಂದಂತೆ ಎದುರಾದಾಗ ಮನಸ್ಸು ಅಲ್ಲಿಷ್ಟು ಇಲ್ಲಿಷ್ಟು ಹರಿದು ಹಂಚಿ ದಣಿದುಬಿಡುವಾಗ ‘ಒಂದು ರೂಪದೊಳನಂತ ರೂಪ’, ‘ಒಂದು ಗುಣದೊಳಗನಂತ ಗುಣ, ಒಂದೊಂದು ಗುಣವೂ ಪರಿಪೂರ್ಣ’, ‘ಅವನ ಗುಣಗಳು ಅಚಿಂತ್ಯಾದ್ಭುತ’ ಮುಂತಾದ ಸಾಲುಗಳು ನೆನಪಾದರೆ ಭಗವಂತನ ಬಗ್ಗೆ ಹೊಸತೊಂದು ಬೆರಗು. ಇವತ್ತಿನ  virtual machine, hypervisor ಗಳ ನೆನಪಾದರೆ ಆ ಕ್ಷಣಕ್ಕೆ ಹೊಸತೊಂದು ‘virtual me’ ಹುಟ್ಟುಹಾಕಿ ಇನ್ನೊಂದರ ಜೊತೆಗೆ ಅದರ context ಸಂಕರವಾಗದೆ ಅದರಷ್ಟಕ್ಕೆ ಅದು ಕೆಲಸಪೂರ್ತಿ ಮಾಡಬರುವಂತಿದ್ದರೆ ಎನ್ನುವ ‘ರೆ’ ಕಾರ.

ಭಗವಂತನಂತೂ ಆಗಲು ಸಾಧ್ಯವಿಲ್ಲ. ಆದರೆ ನನ್ನದೇ ಒಂದು ’virtual me’ ಮಾಡಬಹುದೆ? ಮಾಡಿದರೆ ಹೇಗೆ ಮಾಡ ಬಹುದು?

ಮೊದಲಿಗೆ ‘real me’ ಕೆಲಸವೇನು, ಅದರ ಉಪಕೆಲಸಗಳೇನು, ಅವುಗಳನ್ನು ಮಾಡುವ ಕ್ರಮ ಏನು ಎನ್ನುವದನ್ನ ನೋಡಿಕೊಳ್ಳಬೇಕು. ಆ ಕೆಲಸಕ್ಕೆ ವೇಳೆಯನ್ನೂ, ಬೇಕಾಗುವ ಸಲಕರಣೆಗಳನ್ನೂ ಹೊಂದಿಸಿಕೊಳ್ಳಬೇಕು. ಆ ವೇಳೆಗೆ ಕೆಲಸದ ಸಂಕಲ್ಪ ಮಾಡಬೇಕು. ಕೆಲಸವನ್ನು (ಅಥವಾ ಉಪಕೆಲಸಗಳನ್ನು ಕ್ರಮಬದ್ಧವಾಗಿ) ‘virtual me’ ಗೆ ವಹಿಸಿಕೊಡಬೇಕು. ಎಲ್ಲ ಉಪಕೆಲಸಗಳೂ ಮುಗಿಯುತ್ತ ಬಂದಂತೆ ಕೆಲಸವೂ ಮುಗಿಯುತ್ತಿರುತ್ತದೆ. ‘virtual me’ ಕೊನೆಯ ಉಪಕೆಲಸವನ್ನು ಮುಗಿಸಿದಾಗ ‘real me’ ಎಲ್ಲವನ್ನೂ ಗಮನಿಸಿ ಕೆಲಸವನ್ನು ಮುಗಿಸಬೇಕು. ಅದರಿಂದ ಕಲಿಯಬೇಕಾದ್ದನ್ನು ಕಲಿಯಬೇಕು ಮತ್ತು ಮುಂದೆ ಬಳಸಲು ಅನುಕೂಲವಾಗುವಂತೆ ಸೂಕ್ತವಾಗಿ ಸಂಗ್ರಹಿಸಬೇಕು. ಸಂಗ್ರಹ ನೆನಪಿನಲ್ಲಿ, ಪುಸ್ತಕದಲ್ಲಿ, ಕಂಪ್ಯೂಟರಿನಲ್ಲಿ ಅಥವಾ ಇನ್ನೆಲ್ಲಿಯಾದರೂ ಆಗಬಹುದು. ಎಲ್ಲಿ ಅದು ಸಿಗುತ್ತದೆ ಎನ್ನುವದು ‘real me’ ಗೆ ಗೊತ್ತಿರಬೇಕು.

‘Operation successful but the patient died’ ಅನ್ನುವಂತೆ ಆ ಕೆಲಸಕ್ಕೆ ಅಂದುಕೊಂಡ ಪರಿಣಾಮ ಸಿಗದಿದ್ದರೆ? ನಾನೆಂಬ ‘real me’ ಯ ಕೆಲಸವೇನು ಮತ್ತೆ? ಒಂದು ಪೂರ್ತಿ ಕೆಲಸವನ್ನು ಒಟ್ಟಿಗೆ ನಡೆಸಬೇಕೆ, ಪ್ರತಿಯೊಂದು ಘಟ್ಟದಲ್ಲೂ ‘virtual me’ ಯ ಕೆಲಸದ ಪರಿಣಾಮ ಗಮನಿಸಿ ಬೇಕಾದ ಬದಲಾವಣಗಳೊಡನೆ ಮುಂದಿನ ‘virtual me’ ಯನ್ನು ಶುರುಮಾಡಬೇಕೆ ಎನ್ನುವ ಎಲ್ಲ ನಿರ್ಧಾರಗಳನ್ನೂ ತೆಗೆದುಕೊಳ್ಳಬೇಕಾದ್ದು ’real me’. ಒಂದು ಕೆಲಸದಿಂದ  ಅರಿತದ್ದನ್ನ ಮುಂದೆ ದುಡಿಸಿಕೊಳ್ಳುವದೂ ‘real me’.  ಒಂದು ಕೆಲಸ ನಡೆಯುವಾಗ ತುರ್ತೇನೋ ಬರುತ್ತದೆ, ಇನ್ನೊಂದು ಕಡೆ ಗಮನ ಕೊಡಬೇಕಾಗುತ್ತದೆ. ಆಗ  ’real me’ ಮುಂದೆ ಬರಬೇಕು, ನಿರ್ಣಯ ‘real me’ ಯದ್ದೇ.

‘virtual me’ ಎಂಬ ಕೂಲಿ ಆಳಿನ್ನೂ ಮತ್ತು ‘real me’ ಎಂಬ ಮಾಲೀಕನನ್ನೂ ಪ್ರತ್ಯೇಕಿಸುವದು ಹೇಗೆ? ಪ್ರತ್ಯೇಕಿಸಬೇಕೆ? ಆಳಿನಲ್ಲೊಬ್ಬ ಮಾಲೀಕ, ಮಾಲೀಕನಲ್ಲೊಬ್ಬ ಆಳು ಇರಲೇಬೇಕು. ಉಪಕೆಲಸಗಳ ಪ್ರತಿ ಹಂತವನ್ನೂ ಮೊದಲೇ ನಿರ್ಧರಿಸಿ ಆಳಿಗೆ ಕೊಡಬೇಕೆಂತಿಲ್ಲ. ಮಾಲೀಕನ ಮೂಲಭೂತ ತತ್ವಗಳ ಪ್ರಶ್ನೆ ಬಂದಾಗ ಮಾಲೀಕನದ್ದೇ ನಿರ್ಣಯ. ಉಳಿದಂತೆ ’Things seem more right when you are doing them than when you are thinking about them*’ ಎಂದುಕೊಂಡು ಮಾಡಲು ಆಳಿಗೆ ಬಿಡಬೇಕು. ಪ್ರತಿ ಕೆಲಸದ ಪರಿಣಾಮವನ್ನು ’ಸರ್ವ ಕರ್ಮಾಖಿಲಂ ಜ್ಞಾನೇನ ಪರಿಸಮಾಪ್ಯತೆ’ ಎಂದುಕೊಂಡು ಮಾಲೀಕನಾಗಿ ಅರಿಯುತ್ತ ಹೋದಂತೆ, ಆ ಅರಿವಿನಿಂದ ಆಳನ್ನು ತಿದ್ದಿದಂತೆ, ಆಳು ಮತ್ತು ಮಾಲೀಕರಿಬ್ಬರೂ ಬೆಳೆಯುತ್ತ ಹೋಗುತ್ತಾರೆ.

ಕೊನೆಗೊಂದು ದಿವಸ ಕರೆ ಬಂದಾಗ ಯಾವ ಯಾವ ‘virtual me’ ಗಳು ಎಲ್ಲೆಲ್ಲಿ ಇದ್ದವೋ ಅಲ್ಲಲ್ಲೇ ಬಿಟ್ಟು ಹೊರಡಬೇಕಾಗುತ್ತದೆ. ಯಾಕೆಂದರೆ ಮಾಲೀಕನೂ ನಿಜವಾದ ಮಾಲೀಕನಲ್ಲವಲ್ಲ! ಆ ಕ್ಷಣಕ್ಕೆ ‘virtual me’ ಮತ್ತು ‘real me’ ಗಳು ಮಾಡ್ತಾ ಇದ್ದದ್ದು ಅಲ್ಲಿಗೇ ಪೂರ್ಣ. ‘ಯತ್ಕೃತಂ ತು ಮಯಾ ದೇವ ಪರಿಪೂರ್ಣಮ್ ತದಸ್ತು ಮೇ’. ಇಲ್ಲಿ ಯಾವುದೂ ವ್ಯರ್ಥವಲ್ಲ, ‘ನೇಹಾಭಿಕ್ರಮ ನಾಶೋಸ್ತಿ, ಪ್ರತ್ಯವಾಯೋ ನ ವಿದ್ಯತೆ’!

ಈ ‘virtual’ ವಿಚಾರ ಎಲ್ಲಿಗೆ ಕೊಂಡೊಯ್ಯುವುದೋ ನೋಡೋಣ ಅಂತ ಇದನ್ನೆಲ್ಲಾ ಬರೆಯುತ್ತ ಹೊರಟವನಿಗೆ ಕೊನೆಗೆ ಅನಿಸಿದ್ದು, ಇಷ್ಟೆಲ್ಲಾ ಕಷ್ಟ ಏಕೆ? ದಿವಸ ಸಂಧ್ಯಾ ವಂದನೆ ಮಾಡಿದರೆ ಆಯಿತು. ಆಚಮನ, ಸಂಕಲ್ಪ, ಮಾರ್ಜನ, ಭೂತೋಚ್ಛಾಟನ, ಧ್ಯಾನ, ಜಪ, ಸಮರ್ಪಣಗಳೆಲ್ಲವನ್ನ  ಕ್ರಮವಾಗಿ ಮಾಡುವದನ್ನೇ  ಅಭ್ಯಾಸ ಮಾಡ್ತಾ ಅದನ್ನೇ ಉಳಿದ ಕೆಲಸಗಳಿಗೂ ಅನ್ವಯಿಸಿದರೆ ಬೇಕಾದಷ್ಟು ಪ್ರೊಡಕ್ಟಿವ್ ಆಗುವದು ಅಂತ.  ಸ್ಟೀವ್ ಜಾಬ್ಸ್ ಹೇಳಿದ ‘Your time is limited’ ಎನ್ನುವ ಮಂತ್ರ ಹಿಡಿದರಂತೂ ಇನ್ನೂ ಒಳ್ಳೆಯದು. ಈ ಸಮಯ ಎಷ್ಟು ಸೀಮಿತವಾದದ್ದು ಅನ್ನುವದರ ಪ್ರತ್ಯಕ್ಷ ಅನುಭವ ಬಹಳಷ್ಟು ಬಾರಿ ಆಗಿದೆಯಾದರೂ ಕಳೆದ ಬಾರಿಯ ಭಾರತಕ್ಕೆ ಹೋದಾಗ ಕಂಡ ತಾತನ ಕೊನೆಯ ಒಂದು ವಾರ, ಕೊನೆಯ ಗಳಿಗೆ, ಆ ಸಂದರ್ಭ ಮರೆಯುವಂತಿಲ್ಲ. ಎಲ್ಲ ಆದ ಮೇಲೆ ಅಲ್ಲೂ ತಾತ ಸರಿಯಾಗಿ ಲೆಕ್ಕ ಹಾಕಿಕೊಂಡಂತೆ ಎದ್ದು ಹೋಗಿಬಿಟ್ಟ ಅನಿಸಿತು. ಈ ತಾತನಿಗೆ ಮುಂಚೆ ನನ್ನ ಅಮ್ಮನ ಅಪ್ಪ ಎಂಕಣ್ಣ ತಾತನಂತೂ ‘ತೊಂಭತ್ತು ವರ್ಷದ ಆಯುಷ್ಯ ಅದ, ಅದು ಮುಗಿದ ಗಳಿಗೆ ಹೋಗಿಬಿಡ್ತೀನಿ’ ಅಂತಿದ್ದಾತ ಅದರಂತೆ ತನ್ನ ೯೦ನೇ ಹುಟ್ಟು ಹಬ್ಬದ ದಿನವೇ ಹೊರಟು ಬಿಟ್ಟ. ಅವರಿಬ್ಬರ ಕೊನೆ ಮನಸ್ಸಿನಲ್ಲಿ ಆಗಾಗ ಹಣಕಿ ಇಂಥದ್ದನ್ನೆಲ್ಲ ಯೋಚಿಸುವಂತೆ ಮಾಡುತ್ತದೆ. ಇದರ ಉಪಯೋಗ ನಿಜವಾಗಿ ಆಗುವದು ಈ ಎಲ್ಲ ಯೋಚನೆಗಳ ಪರಿಣಾಮ ಸತತವಾಗಿ ನನ್ನ ಕೆಲಸಗಳಲ್ಲಿ ಕಾಣಿಸತೊಡಗಿದಾಗ. ಆ ದಿನ ಇನ್ನೂ ಬಂದಿಲ್ಲ, ನಿತ್ಯ ಪ್ರಯತ್ನ ಅದರದ್ದೇ!

(* – ‘Things seem more right …’ is a line I picked up from one of the short stories by John Steinbeck. I think the story is ‘To kill a white quail’ )

(ಒಂದಾರು ತಿಂಗಳಿಂದ ಡ್ರಾಫ್ಟಾಗಿ ಉಳಿದಿತ್ತು. ಇವತ್ತು ಕಡೆಗೂ ಇದಕ್ಕೊಂದು ರೂಪ ಕೊಟ್ಟು ಪೋಸ್ಟ್ ಮಾಡುತ್ತಿರುವೆ!)

ಬೆರಗು ನೆನಪಿನಲಿ

ನನ್ನ ಆಫೀಸಿನ ಕಿಟಕಿಯೊಳಗಿಂದ ಕಾಣಿಸುವ ಮಿಲ್ಪಿಟಾಸಿನ ಈ ಬೆಟ್ಟದ ಚಿತ್ರಗಳನ್ನ ಬಹಳಷ್ಟು ಬಾರಿ ನನ್ನ ಫೋನ್ ಕ್ಯಾಮರಾದಲ್ಲಿ ತೆಗೆದಿರುವೆ. ಪ್ರತೀ ಬಾರಿಯೂ ಅಲ್ಲಿ ಕಣ್ಣ ಮುಂದೆ ಹರಡಿಕೊಂಡಿರುವ ಬೆಟ್ಟದ ಭವ್ಯತೆಯನ್ನ ನಾ ತೆಗೆದ ಚಿತ್ರಗಳಲ್ಲಿ ಕಾಣದೆ ಹೋಗಿದ್ದೇನೆ. ತೆಗೆದ ಚಿತ್ರಗಳು ನೆನಪನ್ನು ಮೀಟಿದರೂ ಸಾಕು ಆ ಭವ್ಯತೆಯ ಅನುಭವ ಸಿಗಬಹುದು ಅಂತ ಸಮಾಧಾನ ಮಾಡಿಕೊಳ್ಳುತ್ತೇನೆ.

ಮಳೆಯಿರಲಿ ಚಳಿಯಿರಲಿ ಬಿರುಗಾಳಿ ಬೀಸಿರಲಿ
ಬೆಳ್ ಮೋಡಗಳು ಚುಂಬಿಸಲಿ ಕಾರ್ಮೋಡ
ಗಳ ನೆರಳಿರಲಿ ಸಂಜೆ ರವಿ ರಂಗೇರಿಸಿರಲಿ
ಸಲೆ ಬಿಸಿಲಿರಲಿ ತಿಂಗಳಾ ಬೆಳಕಿರಲಿ

ತಾಳುವುದು ಬಾಳುವುದು ಅಳುಕದೇ ನಿಲ್ಲುವುದು
ಬೋಳು ಬೆಟ್ಟವಿದು ತೋರಿಸುವ ರೂಪ
ಗಳಿಗೆ ಬೆರಗಾಗಿ ಫೋನೊಳ್ ಸೆರೆ ಹಿಡಿದ ಚಿತ್ರ
ಗಳಲಿ ಬೆಟ್ಟವಿದೆ ಬೆರಗು ನೆನಪಿನಲಿ

 

This slideshow requires JavaScript.

ಒಂಟಿ, ಮರ

Lone Cypress

ಭುವಿ  ತಿರುಗಿ
ದಿನ  ಕರಗುವಾಗ
ಪಡುವಣದ ಕಡಲು,
ಮುಗಿಲು  ಕಲೆಯುವಲ್ಲಿ
ರವಿ  ತೂರಿದ  ಬಣ್ಣ
ಕಡಲಲ್ಲಿ  ಮುಗಿಲಲ್ಲಿ
ದಂಡೆಯಲ್ಲೂ   ಚೆಲ್ಲಿದಾಗ
ಹೊಂಬಣ್ಣದಿ  ಮಿಂದ
ಬಂಡೆ  ಮೇಲೆ
ಒಂಟಿ ಮರ

ಮುಳುಗು ಸೂರ್ಯನ ಬೆಳಕು
ರಂಗೊಡೆದು
ಓಕುಳಿಯಾಗಿ
ಬಾನು ಭುವಿಯಲ್ಲಿ
ಕಡಲ  ಅಲೆಗಳಲ್ಲಿ   ಕಣ್ಣಲ್ಲಿ
ಪ್ರತಿಫಲಿಸಿ
ಮನ  ತೊಯ್ಯುವಾಗ
ನಾನು

ಒಲವಿನ ಮಡದಿಗೆ

You may have seen the invite on Kendasampige to translate one of Eliot’s poems to Kannada. Once in a while some bug bites me and I end up scribbling a few lines that (at least to me) seem like poem or try to translate some poem I like. Many a times the attempted translations end up like a patch work of words picked directly from the dictionary instead of a poem coming from the heart. But I’m enjoying finding words in Kannada that express the same thing that I see in the original. I usually try to find minimum number of words that I can employ to convey the meaning. Here’s the attempted translation of the poem and the original following that.

ಒಲವಿನ ಮಡದಿಗೆ

ಋಣಿ ನಾನವಳಿಗೆ,
ಎಚ್ಚರದಿ ಇಂದ್ರಿಯಗಳ ಹುರಿಗೊಳಿಸುತ
ನನ್ನೊಳು ಪುಟಿವ ಆನಂದದ ಸೆಲೆಗಾಗಿ
ನಮ್ಮ ಶಾಂತ ನಿದ್ರೆಯ ಕಾಪಿಡುವ
ಉಸಿರಾಟಗಳ ಏಕ ಲಯಕ್ಕಾಗಿ
ಪ್ರೇಮಿಗಳಾಗಿ ಸೂಸುವ ಪರಸ್ಪರರ ಕಂಪಿಗಾಗಿ
ಆಡದಲೆ ಆಲೋಚನೆಗಳು ಅವೇ ಆಗುವ ಪರಿಗಾಗಿ
ಅಂತೆ, ಅರ್ಥದ ಹಂಗಿಲ್ಲದ ಮಾತುಗಳಿಗಾಗಿ.

ಬಿರು ಚಳಿಗಾಲದ ಗಾಳಿ ಶೋಷಿಸಲಾರದು
ಉರಿ ಬೇಸಗೆಯ ಸೂರ್ಯ ಸೊರಗಿಸಲಾರ
ಗುಲಾಬಿ ತೋಟದ ಗುಲಾಬಿಗಳ; ಅದು ನಮ್ಮದು, ಕೇವಲ ನಮ್ಮದು

ಅರ್ಪಣೆಯ ತೆರೆದಿಟ್ಟಿದ್ದು ಇತರರಿಗಾಗಿ, ಆದರೆ
ಈ ಆಪ್ತ ಮಾತೆಲ್ಲ ನಿನಗೇ ಹೇಳಿದ್ದು, ಎಲ್ಲರೆದುರೆ

A DEDICATION TO MY WIFE

To whom I owe the leaping delight
That quickens my senses in our wakingtime
And the rhythm that governs the repose of our sleepingtime,
the breathing in unison.
Of lovers whose bodies smell of each other
Who think the same thoughts without need of speech,
And babble the same speech without need of meaning…

No peevish winter wind shall chill
No sullen tropic sun shall wither
The roses in the rose-garden which is ours and ours only

But this dedication is for others to read:
These are private words addressed to you in public

ಸ್ವಾತಂತ್ರ್ಯ

ಇತ್ತೀಚೆಗೆ ಯಾವುದೋ ವೆಬ್ ಸೈಟಿನಲ್ಲಿ ರವೀಂದ್ರನಾಥ ಟಾಗೋರರ ಈ ಪದ್ಯ ನೋಡಿದಾಗ ಕಟ್-ಪೇಸ್ಟ್ ಮಾಡಿಟ್ಟುಕೊಂಡಿದ್ದೆ.

Where the mind is without fear and the head is held high;
Where knowledge is free;
Where the world has not been broken up into fragments by narrow domestic walls;
Where words come out from the depth of truth;
Where tireless striving stretches its arms towards perfection;
Where the clear stream of reason has not lost its way into the dreary desert sand of dead habit;
Where the mind is led forward by thee into ever-widening thought and action …
Into that heaven of freedom, my father, let my country awake.

ಇವತ್ತು ಮತ್ತೆ ಓದಿದಾಗ ಕನ್ನಡಕ್ಕಿಳಿಸಬೇಕೆನಿಸಿತು.

ಮನಕೆಂದು ಅಳುಕಿರದಲ್ಲಿ, ತಲೆ ಎತ್ತಿ ನಿಲ್ಲುವಲ್ಲಿ
ಅಂಕೆಯಿಲ್ಲದ ಅರಿವಿರುವಲ್ಲಿ
ಅಲ್ಲಲ್ಲೆ ಎದ್ದು ವಿಶ್ವ ವಿಸ್ತಾರ ಮರೆಸುವ ಕಿರುದಾರಿ ಗೋಡೆಗಳಿಲ್ಲದಲ್ಲಿ
ಮಾತುಗಳೆಲ್ಲವು ಸತ್ಯವಚನಗಳಾಗಿರುವಲ್ಲಿ
ದಣಿಯದ ದುಡಿತ ಪೂರ್ಣತೆಯೆಡೆಗೆ ಕೈ ಚಾಚುವಲ್ಲಿ
ನಿರ್ಜೀವ ನಡವಳಿಕೆಗಳ ಮರಳುಗಾಡಿನಲ್ಲಿ ತಿಳಿವಿನ ತೊರೆ ದಿಕ್ಕೆಟ್ಟು ಬತ್ತಿರದಲ್ಲಿ
ಎಡೆ ಬಿಡದೆ ವಿಸ್ತರಿಸುವ ಕಾರ್ಯ ಚಿಂತನೆಗಳೆಡೆಗೆ ಬುದ್ಧಿಯ ನೀ ನಡೆಸುವಲ್ಲಿ
ಸ್ವಾತಂತ್ರ್ಯದ ಆ ಸ್ವರ್ಗದ ಕಡೆಗೆನ್ನ ನಾಡ ಕಣ್ಬಿಡಿಸೊ, ಹೇ ತಂದೆ

ವಿರೋಧಿಯ ವರ್ಷ

ಚೈತ್ರದ ಚಿಗುರಿಗೆ
ವಸಂತದ ಬರುವಿಗೆ
ಅರಳುವ ಮನದಲಿ
ವಿರೋಧಿಯ ಹೆಸರು

ಸರ್ವರ ಗೆಲಿದು ಸರ್ವರ
ಧರಿಸಿದ ಸಂವತ್ಸರ
ತಿರುಗಲು ಶುರುವಾಯಿತು
ವಿರೋಧಿಯ ವರುಷ

ಹರಡುತ ಬೆಳಕನು, ಪರಿ
ಹರಿಸುತ ತೊಡಕನು, ಮಧು-
ವಿರೋಧಿಯು ಹರಸಲಿ
ಸರ್ವರ ವರುಷವಿಡಿ

ಎಲ್ಲರಿಗೂ ವಿರೋಧಿ ಸಂವತ್ಸರದ ಶುಭಾಶಯಗಳು’

ಟ್ರಾಫಿಕ್

( ಹಳೆಯದೊಂದು ಕವನ: ಇತ್ತೀಚೆಗೆ ಅಲ್ಕೆಮಿಸ್ಟ್ ಓದುವಾಗ ನೆನಪಾದ ಈಶಾವಾಸ್ಯದ ಬಗ್ಗೆ ಬರೆದಿದ್ದೆ. ಅದೇ ಈಶಾವಾಸ್ಯ ಮೈಲುದ್ದದ ಟ್ರಾಫಿಕ್ಕಿನಲ್ಲಿ ಸಿಕ್ಕಿ ಹಾಕಿಕೊಂಡಾಗ ನೆನಪಾದಾಗ ಹೀಗನಿಸಿತ್ತು)

ಮೈಲುದ್ದ ನಿಂತ ಕಾರುಗಳ ಮಧ್ಯೆ
ನಿಂತು ನಿಂತು ಇಂಚಿಂಚೆ ಮುಂದೆ ಸರಿವ
ಟ್ರಾಫಿಕ್ಕಿನಲ್ಲಿ ಸಿಲುಕಿದ್ದಾಗ ನೆನಪಾದದ್ದು
‘ತದೇಜತಿ ತನ್ನೇಜತಿ’ 

ಖಾಲಿ ರಸ್ತೆಯಲ್ಲಿ ೬೫ರ ವೇಗದಲ್ಲಿ
ಹತ್ತೇನಿಮಿಷಗಳಲ್ಲಿ ತಲುಪುವ ಮನೆ
ಬಲು ದೂರ ಎನಿಸಿದಾಗ ನೆನಪಾದದ್ದು
‘ತದ್ದೂರೇ ತದ್ವಂತಿಕೆ’ 

ಎರಡು ಒಂದು ಎರಡು; ಅಪರೂಪಕ್ಕೊಮ್ಮೊಮ್ಮೆ
ಮೂರು ಎಂದು ಸತತ ಬದಲಿಸುತ್ತ ಗೇರು
ಕೊನೆಗೊಮ್ಮೆ ಎಕ್ಸಿಟ್ಟಿಗಿಳಿದಾಗ ಅನಿಸಿದ್ದು
‘ಕೃತೋ ಸ್ಮರ ಕೃತಂ ಸ್ಮರ’

ಟಿಪ್ಪಣಿ:
  ಈಶಾವಾಸ್ಯದ ಋಷಿ  ಬ್ರಹ್ಮ ಎಂಥದ್ದು ಎಂದು ಹೇಳುತ್ತ ಅದು ಚಲಿಸ್ತದೆ-ಚಲಿಸೋದಿಲ್ಲ (ತದೇಜತಿ-ತನ್ನೇಜತಿ), ಅದು  ದೂರವಿದೆ-ಹತ್ತಿರವಿದೆ (ತದ್ದೂರೆ-ತದ್ವಂತಿಕೆ), ಎಲ್ಲದರ ಒಳಗಿದೆ-ಎಲ್ಲದರ ಹೊರಗಿದೆ  ಎಂದು ವೈರುಧ್ಯಗಳ ಪಟ್ಟಿ ಕೊಡುತ್ತಾನೆ. ಕೊನೆಯಲ್ಲಿ ಆ ಬ್ರಹ್ಮನನ್ನು ಪ್ರಾರ್ಥಿಸುತ್ತಾ ಮಾಡಿದ್ದನ್ನು ನೆನಪಿಡು-ಮಾಡಿದವನನ್ನು ನೆನಪಿಡು (ಕೃತೋ ಸ್ಮರ-ಕೃತಂ ಸ್ಮರ) ಎಂದು ಕೇಳಿಕೊಳ್ಳುತ್ತಾನೆ.  ಈ ಕವನಕ್ಕೂ ಈಶಾವಾಸ್ಯಕ್ಕೂ ಏನೂ ಸಂಬಂಧ ಇಲ್ಲ, ಅದರ ತುಣುಕುಗಳು ಸಂದರ್ಭಕ್ಕೆ ಹೊಂದಿದ್ದವು ಅನಿಸಿತ್ತು ಅಷ್ಟೇ!
 

ವಾಹ್ ತಾಜ್…

ತಾಜ್ ಮಹಲಿನ ಅಚ್ಚ ಬಿಳಿ ಬಣ್ಣವನ್ನು ಬಿಳಿಯಾಗೇ ಉಳಿಸಲಿಕ್ಕೆ ಅದರ ಸುತ್ತ ತುಳಸಿ ಗಿಡ ಬೆಳೆಸುತ್ತಾರೆ ಎನ್ನುವ ಸುದ್ದಿ ಓದಿದೆ. ತುಳಸಿಯ ಪುಣ್ಯದಿಂದ ಅದರ ಬಣ್ಣ ಉಳಿದರೆ ಒಳ್ಳೆಯದೆ, ಉಳಿಯಲಿ.

೪-೫ ವರ್ಷಗಳ ಹಿಂದೆ ತಾಜ್  ನೋಡಿದ್ದು ನೆನಪಾಯಿತು.

೨೦೦೪ರ ಸೆಪ್ಟೆಂಬರಿನಲ್ಲಿ ನನ್ನ ಹೆಂಡತಿಯ ವೀಸಾಗೋಸ್ಕರ ದೆಹಲಿಗೆ ಹೋಗಬೇಕಾಗಿತ್ತು. ಚೆನ್ನೈ ಅಲ್ಲಿನ ಅಮೇರಿಕನ್ ಕಾನ್ಸುಲೇಟಿನಲ್ಲಿ ವೀಸಾ ಸಂದರ್ಶನ ಸರಳವಾಗಿ ಸಿಗದೇ ಇದ್ದ ಕಾಲ ಅದು. ದೆಹಲಿಗೆ ಹೋಗಲು ಅನುಮತಿ ಕೊಡುತ್ತಿದ್ದದ್ದರಿಂದ ಅಲ್ಲಿಗೇ ಹೋಗಿದ್ದೆವು. ಹಾಗೇ  ಮಥುರಾ, ಆಗ್ರಾವನ್ನೂ ನೋಡಿಕೊಂಡು ಬರಲು ಹೋಗಿದ್ದೆವು. ದೆಹಲಿ ಬಿಸಿಲು ಮತ್ತು ಅಲ್ಲಿಯ ಹ್ಯುಮಿಡಿಟಿಯ ಪರಿಚಯವಿಲ್ಲದವರು ಎ.ಸಿ. ಇಲ್ಲದ ಕಾರನ್ನು ಬುಕ್ ಮಾಡಿ ದುಡ್ಡು ಉಳಿಸಲು ಹೇಳಿದ್ದನ್ನು ಕೇಳಿ ಹಾಗೇ ಮಾಡಿದ್ದು ಎಷ್ಟು ದೊಡ್ಡ ತಪ್ಪಾಗಿತ್ತು!! ದೆಹಲಿಯಿಂದ ಆಗ್ರಾ ತಲುಪುವಷ್ಟರಲ್ಲಿ ಮೈ ಎಲ್ಲ ನೀರಿಳಿದು ಅಂಟಂಟಗಿ ಹೋಗಿತ್ತು. ಮಧ್ಯಾನ್ಹ ೧೨.೩೦ರ ಸುಮಾರಿಗೆ ತಾಜ್ ಮುಂದೆ ಹೋದಾಗ ಅಮರ ಪ್ರೇಮದ ಕುರುಹು, ಭವ್ಯ ತಾಜ ಎಂದೇನೂ ಅನಿಸದೇ, ಓ ಇದೇನಾ ತಾಜ್ ಎಂದಷ್ಟೇ ಅನಿಸಿ ಬಿಟ್ಟಿತ್ತು. ನಾವು ಹೋದ ದಿನ ಷಹಾಜಹಾನನು ಸತ್ತ ದಿನವೆಂದು ಪ್ರವೇಶ ಶುಲ್ಕ ಮಾಫಿ ಇತ್ತು. ಸಾಮಾನ್ಯವಾಗಿ ತೆರೆಯದೇ ಇರುವ ಷಹಾಜಹಾನ ಮುಮ್ತಾಜರ ಗೋರಿಯ ಭಾಗವನ್ನೂ ಅವತ್ತು ತೆರೆದಿದ್ದರು.

ಅವತ್ತಿನ ಅನುಭವವನ್ನು ಈ ಚಿತ್ರಕವನದ ಚಿತ್ರಕ್ಕಾಗಿ ಬರೆದ ಕವನವೊಂದರಲ್ಲಿ ಬರೆದಿದ್ದೆ. ಅದನ್ನು ಹೆಕ್ಕಿ ಹಾಕುತ್ತಿರುವೆ ಇಲ್ಲಿ ಈಗ… (ಚಿತ್ರ: ಚಿತ್ರಕವನದಿಂದ)

ತಾಜ್ ಮಹಲ್ - ಚಿತ್ರಕವನದಿಂದ

ತಾಜ್ ಮಹಲ್ - ಚಿತ್ರಕವನದಿಂದ

ಒಂದಷ್ಟು ಸ್ವಗತಗಳು

ವರ್ಷವೆಷ್ಟುರುಳಿದವೊ ಮುಮ್ತಾಜಳ ಗೋರಿಯಾಗಿ
ಮೂರುನೂರರ ಮೇಲೆ ಹತ್ತಾರಾಗಿರಬೇಕು
ಅಮೃತಶಿಲೆಯ ಬಿಳುಪು ಹೊಳಪು; ಪಚ್ಚೆ
ಹರಳು, ಮುತ್ತು ರತ್ನದ ಕುಸುರಿ ಒನಪು
ಸಿರಿ ಸಂಪತ್ತಿನ ಸೂರೆ ಅದೆಷ್ಟೆ ಇರಲಿ,
ಅರಸನೊಲವಿನ ಆಚ್ಛಾದನೆಯಾಗಿರದಿದ್ದರೆ
ಗೋರಿ ಸುತ್ತಿದ ಬಿಳಿ ಬಟ್ಟೆಯಷ್ಟೆ ತಾನೆ!

ತಾಜ್ ಮಹಲೊ ಇದು ತೇಜೋ ಮಹಾಲಯವೊ
ಗೋರಿ ಮುಮ್ತಾಜಳದ್ದೊ, ಹಿಂದೂ ಇತಿಹಾಸದ್ದೊ
ಕಾಲಗರ್ಭದೊಳಿಣುಕಿ ಹೇಳಬಾರದೆ ಕಂಡವರು
’ಕಮಂಡಲ’ದ ನೀರಿಗೆನ್ನ ತಪವನೆರೆದರೆ ಸಿಕ್ಕೀತೆ
ಇತಿಹಾಸದ ಆ ಪುಟದ ಸತ್ಯ ನನಗೇನಾದರು?

ಹಸಿರು ಹಾಸಿನ ಕೊನೆಗೆ ಹೊಳೆವ ಮಹಲು
ನೀಲಿ ಬಾನ ಬೆಳಗಿರುವ ಪರಿ ನೋಡ
ಚಿತ್ರಕಾರನ ಕೈಚಳಕವೋ ಇದೆ ನಿಜರೂಪವೊ;
ನಂಬಲಾರೆ, ಹಿಂದೊಮ್ಮೆ ಸೆಪ್ಟೆಂಬರಿನಾರ್ದ್ರತೆ,
ಉರಿವ ಸೂರ್ಯ, ಸುರಿವ ಬೆವರಿಗೆ ತೊಯ್ದ
ಅರಿವೆ ಅಂಟಿದ ಮೈ ಜಿಗಿಗೆ ಮನ ರೋಸಿ
’ಇದೇನಾ ತಾಜ್’ ಎಂದಸಡ್ಢೆಯಿಂದಂದದ್ದು
ಇದರ ಮುಂದೆ ನಿಂತೇ ಎಂದು!

ಹೊಸಬೆಳಗು

(ಸಂಪದದಲ್ಲಿ ಹರಿಪ್ರಸಾದರ ಚಿತ್ರಕ್ಕೆ ಬರೆದ ಕವನ)

ಹಾರು ಹಕ್ಕಿಗಳಾಡುಂಬೋಲದೊಳದೋ
ಅರುಣನ ತೇರು, ಮರುದಿನವೆ ಇನ್ನೇನು!
ಏರಲಾಗದೆತ್ತರಗಳ ಪ್ರತೀಕ ಅಕೋ ಅಲ್ಲಿ
ಹರಿವ ನದಿಯ ಅಲೆ ಅಲೆಗಳಲ್ಲೂ
ವ್ಯರ್ಥ ಕಳೆದ ಕಾಲದ ನೆರಳು, ನರಳು
ಮರಗಟ್ಟಿ ಚಳಿಗೆ ಉದುರಿದೆಲೆಗಳ
ಮರದಂತೆ ಬರಡೆನಿಸಲು ಮನವು…

ಕಡಲ ಕಡೆದಂತಾಯಿತು ಒಮ್ಮೆಲೆ
ಒಡಲ ಬೇಗುದಿಯೆಲ್ಲ ಕರಗಿತು
ಮೂಡಲದ ಒಡೆಯನೊಡ್ಡೋಲಗ,
ಹಾಡುವ ಹಕ್ಕಿಗಳುಲುವು, ಬ-
ರಡೆಂದಿದ್ದ ಮರದ ಹೊಸ ಚಿಗುರು
ತಡವರಿಸದೆ ಹರಿವ ನದಿ ಸಮಷ್ಟಿಗೆ
ಎದೆ ತೆರೆದ ಮರುಗಳಿಗೆ…

ಸೋಲು ಗೆಲುವುಗಳ ಪರಡಿ ಪಾ-
ತಾಳಗರಡಿಯಾಗಿ ಒಳಗಿಳಿದು ಜೀವ
ಸೆಲೆಗೆ ಅಮೃತವನೆ ಹರಿಸಿರಲು
ಒಳಗೆಲ್ಲ ಹೊಸಬೆಳಗು, ಹೊರಗೂ…

ಅದೋ ಕರೆದಿವೆ ಅವೇ ಎತ್ತರಗಳು ಮತ್ತೆ