ಪ್ರೀತಿ ಎಂದರೆ…

ಪ್ರೀತಿಯೆಂದರೇನು?

ಆಕರ್ಷಣೆಯೆ? ಅಮಲೆ? ಹದಿಹರೆಯದ ಹುಚ್ಚೆ? ಏನೋ ತಿಳಿಯದ ಉನ್ಮಾದವೆ? ಯಾರೋ ಹೇಳಿದಂತೆ LOVE ಎಂದರೆ Loss Of Valuable Energy ಯೆ? ಅದೊಂದು ಕೆಮಿಕಲ್ ರಿಯಾಕ್ಶನ್ನೇ ಅಥವಾ (ಅತಿ) ಭಾವುಕತೆಯ ಉತ್ಪನ್ನವೆ ಅಥವಾ ಒಂದು ಬಿಸಿನೆಸ್ ಆಪರ್ಚುನಿಟಿಯೆ? ಯಾವುದೇ ವ್ಯಕ್ತಿ ಅಥವಾ ವಸ್ತು ಕೊಡುವ ಸುಖಕ್ಕೊಂದು ಹೆಸರೆ? ಅದೊಂದು ಚಟವೆ? ಅಥವಾ ದೌರ್ಬಲ್ಯವೆ?”

‘Love is a verb.’ ಸ್ಟೀವನ್ ಕೋವಿಯ ಪುಸ್ತಕದಲ್ಲಿ ಯಾವಾಗಲೋ ಓದಿದ್ದು. ಪ್ರೀತಿ ಎಂದರೆ ಏನು ಎನ್ನುವದಕ್ಕೆ ಅತ್ಯಂತ ಸಮಂಜಸ ಉತ್ತರ ಅದೇ ಅಂತ ನನ್ನ ಅನಿಸಿಕೆ.

ನೀವೇನಂತೀರಿ?

Happy Valentines Day!!

ಭಾವಾಷ್ಟ ಪುಷ್ಪಂಗಳ…

(ಮೊನ್ನೆ ಮಧ್ವ ನವಮಿ ನಿಮಿತ್ತ ನನ್ನಪ್ಪ ಸುಮಧ್ವ ವಿಜಯದ ಶ್ಲೋಕವನ್ನೂ, ಜೊತೆಗೆ ಗೋಪಾಲದಾಸರು ಅಷ್ಟ ಭಾವ ಪುಷ್ಪಗಳ ಬಗ್ಗೆ ರಚಿಸಿದ ಸುಳಾದಿಯನ್ನೂ ಟೈಪಿಸಿ ಕಳಿಸಿದ್ದರು. ಅವೆರಡನ್ನೂ ಓದಿ, ಅವುಗಳ ಸುತ್ತಲೇ ತಿರುಗಿದ ವಿಚಾರಗಳ ಕುರಿತು ಈ ಪೋಸ್ಟು)

ಮಧ್ವಾಚಾರ್ಯರ ಜೀವನ ಚರಿತ್ರೆಯನ್ನು ಕಟ್ಟಿ ಕೊಡುವ ಬಹು ಮುಖ್ಯ ಕೃತಿ, ಅವರ ನೇರ ಶಿಷ್ಯ  ತ್ರಿವಿಕ್ರಮ ಪಂಡಿತಾಚಾರ್ಯರ ಮಗ, ನಾರಾಯಣ ಪಂಡಿತಾಚಾರ್ಯರ ಸುಮಧ್ವ ವಿಜಯ. ಅದರ ಒಂದು ಸಂಧಿಯಲ್ಲಿ ಮಧ್ವಾಚಾರ್ಯರು ಪೂಜೆಯನ್ನು ಮಾಡುವ ಪರಿಯನ್ನು ಸುಂದರವಾಗಿ ಹಿಡಿದಿಟ್ಟಿದ್ದಾರೆ. ಬಗೆ ಬಗೆಯ ಹೂವುಗಳಿಂದ ದೇವರನ್ನು ಪೂಜಿಸುವುದನ್ನ ವಿವರಿಸುತ್ತಾರೆ. ಮುಂದುವರೆದು, ಆಚಾರ್ಯರು ಬರೀ ಬಾಹ್ಯದಲ್ಲಿ ಮಾತ್ರ ಹೀಗೆ ಹೂವುಗಳಿಂದ ಪೂಜಿಸುವದಲ್ಲದೇ ಅಂತರಂಗದಲ್ಲೂ ದೇವನನ್ನು ಅಷ್ಟ ಭಾವ ಪುಷ್ಪಗಳಿಂದ ಪೂಜಿಸುತ್ತಾರಲ್ಲವೇ ಎಂದು ಬೆರಗು ಮೂಡಿಸುತ್ತಾರೆ.

ತಮರುಣಿ-ಮಣಿ-ವರ್ಣಂ ದಿವ್ಯ-ದೇಹಾಖ್ಯ-ಗೇಹೇ
ಸ್ನಪಿತಮತಿ-ಪೃಥು-ಶ್ರದ್ಧಾ-ನದೀ=ಚಿತ್ತ-ವಾರ್ಭಿಹಿ|
ನನು ಸ ಯಜತಿ ನಿತ್ಯಂ ಹೃತ್-ಸರೋಜಾಸನ-ಸ್ಥಂ
ನ ತು ಸಕ್ರುದಿತಿ ಪುಶ್ಪೈರಷ್ಟಭಿರ್ಭಾವ-ಪುಷ್ಪೈಹಿ ||೩೭||
- ಶ್ರೀ ಮಧ್ವ ವಿಜಯ. ೧೪ ನೇ ಸರ್ಗ.

ಪದ್ಮರಾಗದ ನಸುಕೆಂಬಣ್ಣದ ಭಗವಂತನನ್ನು, ದಿವ್ಯದೇಹವೆಂಬ ಮನೆಯಲ್ಲಿ ಹೃದಯ ಕಮಲದ ಪೀಠದಲ್ಲಿ ನೆಲೆಸಿದವನನ್ನು ಮೀಯಿಸುತ್ತ, ವಿಶಾಲವಾಗಿ ಹರಿವ ನಂಬಿಕೆಯ ನದಿಯಲ್ಲಿ ತುಂಬಿದ ಚಿತ್ತವೆಂಬ ನೀರಿನಿಂದ ಪೂಜಿಸುತ್ತಾರಲ್ಲವೆ ಅವರು ನಿತ್ಯವೂ ಎಂಟು ಬಗೆಯ ಭಾವಪುಷ್ಪಗಳಿಂದ, ಬರಿದೆ ಒಮ್ಮೆ ಈ ಹೂವುಗಳಿಂದಷ್ಟೆ ಅಲ್ಲ.
                                    (ಈ ಶ್ಲೋಕದ ಅರ್ಥವನ್ನ ಬಹುಷಃ ಬನ್ನಂಜೆ ಗೋವಿಂದಾಚಾರ್ಯರ ಶ್ರೀ ಮಧ್ವ ವಿಜಯ ಸಂಗ್ರಹದಿಂದ ತೆಗೆದುಕೊಂಡದ್ದು ಅನಿಸುತ್ತದೆ)

ವ್ಯಾಸನಕೆರೆ ಪ್ರಭಂಜನಾಚಾರ್ಯರ ಅರ್ಥ ಸಹಿತ ಸಂಗ್ರಹದ ಸುಮಧ್ವವಿಜಯ ಪುಸ್ತಕದಲ್ಲಿ ಈ ಶ್ಲೋಕದ ಅಡಿ ಟಿಪ್ಪಣಿಯಲ್ಲಿ ಅಷ್ಟ ಭಾವ ಪುಷ್ಪಗಳನ್ನು ತಿಳಿಸುವ ಈ ಕೆಳಗಿನ ಶ್ಲೋಕವನ್ನು ಕೊಟ್ಟಿದ್ದಾರೆ.

ಅಹಿಂಸಾ ಪ್ರಥಮಂ ಪುಷ್ಪಂ ಪುಷ್ಪಮಿಂದ್ರಿಯ ನಿಗ್ರಹಂ
ಸರ್ವಭೂತ ದಯಾ ಪುಷ್ಪಂ ಕ್ಷಮಾಪುಷ್ಪಂ ವಿಶಿಷ್ಯತೇ
ಜ್ಞಾನ ಪುಷ್ಪಂ ತಪಃ ಪುಷ್ಪಂ ಧ್ಯಾನ ಪುಷ್ಪಂ ತು ಸಪ್ತಮಂ
ಸತ್ಯಂ ಚೈವಾಷ್ಟಮಂ ಪುಷ್ಪಮೇಭಿಸ್ತುಷ್ಯತಿ ಕೇಶವ

(ಅಹಿಂಸೆ, ಇಂದ್ರಿಯ ನಿಗ್ರಹ, ಸರ್ವಭೂತ ದಯಾ, ಕ್ಷಮೆ, ಜ್ಞಾನ, ತಪ, ಧ್ಯಾನ ಮತ್ತು ಸತ್ಯ ಗಳೇ ಎಂಟು ಭಾವ ಪುಷ್ಪಗಳು. ಕೇಶವನು ಇವುಗಳಿಂದ ಅರ್ಚಿಸುವದರಿಂದ ಸಂತುಷ್ಟನಾಗುತ್ತಾನೆ)

ಈ ಎಂಟು ಪುಷ್ಪಗಳ ಕುರಿತು ಗೋಪಾಲದಾಸರು ಸುಳಾದಿಯನ್ನು ರಚಿಸಿದ್ದಾರೆಂದು ತಿಳಿದದ್ದು ಅಪ್ಪ ಇದನ್ನು ಟೈಪಿಸಿ ಈ ಮೇಲಿನಲ್ಲಿ ಕಳಿಸಿದಾಗಲೇ.

               ಧ್ರುವ ತಾಳ
ಭಾವಾಷ್ಟ ಪುಷ್ಪಂಗಳ ದೇವಗೆ ಅರ್ಪಿಸುವ
ಭಾವನೆಯನು ಕೇಳಿ ಭಕ್ತಜನರು
ಜೀವರಿಂದ ಈ ಧರ್ಮ ಎಂದಿಗೆ ಆದದಲ್ಲ
ದೇವನಲ್ಲೇವೆ ಇಂಥ ಗುಣಗಳುಂಟು
ಭಾವಾಷ್ಟ ಪುಷ್ಪ ಗುಣವ ದೇವನಲ್ಲಿಪ್ಪವೆಂದು
ಜೀವ ತಿಳಿದರೆ ಉದ್ಧಾರ ಉಂಟು
ಜೀವರೆಂಬುವರು ಕರ್ಮ ಬದ್ಧರು ಇನ್ನು
ದೇವನು ಕರ್ಮ ತ್ರಿಗುಣಾದಿ ರಹಿತ
ಜೀವರಿಂದಲಿ ಅತ್ಯಂತ ಭೇದ ಸಾಕಾರ ಹರಿ
ಯಾವತ್ತರಾದಿ ವ್ಯಾಪ್ತ ಎಣಿ ಇಲ್ಲದ ಮೂರ್ತಿ
ಪಾವನಾಂಗ ಪಾಪನಾಶ ನಿತ್ಯತೃಪ್ತಾ
ಜೀವದಿ ಜಡದಿ ಎಂದಿಗೆ ಅಗಲದೆ ಇಪ್ಪ
ಈ ವಿಧ ಶಕುತಿಯ ಈಶ ಗೋಪಾಲವಿಟ್ಠಲ
ದೇವರಿಗುಂಟೆಂದು ಅರಿವ ಜೀವನೆ ಬಲುಧನ್ಯ ||೧||

ಮಠ್ಯ ತಾಳ
ಬೊಮ್ಮಾಂಡವ ಸೃಜಿಸಿ ಬೊಮ್ಮನೊಳಗೆ ನಿಂತು
ಸುಮ್ಮನಸರನೆಲ್ಲ ನಿರ್ಮಿಸಿ ಪಾಲಿಸಿ
ಬೊಮ್ಮಾಂಡ ಅಳಿಸಿ ಬೊಮ್ಮನ ಕೊಲ್ಲುವ
ಬೊಮ್ಮಹತ್ತಿ ದೋಷವು ಎಮ್ಮಯ್ಯಗಿಲ್ಲ
ಹಮ್ಮಿನ ಹಂಸಡಿಬಿಕರ್ಯಲ್ಲಾರಾ
ನಿರ್ಮಳದಿ ಕೊಂದ ನಿರ್ಮತ್ಸರದಿಂದ
ಧರ್ಮದಿ ಈ ಪುಷ್ಪ ನಮ್ಮಯ್ಯಗೆಂದು
ಘಮ್ಮನೆ ಅರ್ಪಿಸು ಘನ ಭಕುತಿಯಲ್ಲಿ
ರಮ್ಮೆರಮಣನೆ ಗೋಪಾಲವಿಟ್ಠಲ ಪರ
ಬೊಮ್ಮ ಒಲಿವ ಹೀಗೆ ಧರ್ಮ ಅರಿದವರಿಗೆ ||೨||

ರೂಪಕ ತಾಳ
ಎರಡೆಂಟು ಸಾಸಿರ ಅರಸಿಯರ ಕೂಡ
ಪರಿ ಪರಿ ಕ್ರೀಡಿಯ ಮಾಡಿ ನೋಡಿ ಚಲ್ವ
ತರುಳ ತನದಿ ಹನ್ನೆರಡು ಸಾಸಿರಮಂದಿ
ತರುಳರ ಪಡೆದು ತಾ ಪರೀಕ್ಷಿತನಿಗೆ ಇನ್ನು
ಪರಿಣಾಮ ಮಾಡಿದವರ ಬ್ರಹ್ಮಚಾರಿ ಎಂದು
ಸರಿ ಹೋಗುವದೇ ಇಂಥ ಚರಿಯ ಮನುಜರಿಂದ
ಹರಿಗೆ ಇಂದ್ರಿಯನಿಗ್ರಹ ಸ್ಥಿರ ಪುಷ್ಪವೆಂತೆಂದು
ಅರಿದು ಅರ್ಪಿಸುವ ಜೀವರಿಗೆ ಲೇಪಿಸದು
ಪರಮದಯಾಳು ಗೋಪಾಲವಿಠ್ಠಲ ತನ್ನ
ಆರಿದಂತೆ ಫಲವೀವಾ ಶರಣರ ಜನಕೆ ||೩||

ಝಂಪೆ ತಾಳ
ಭೂತದಯಾಪುಷ್ಪ ಭೂತೇಶಗಲ್ಲದೆ
ಭೂತಾಧಾರದಿ ಇಪ್ಪ ಭೂತರಿಗೆ ಥರವೇ
ನೀತಿಲಿ ತ್ರಿವಿಧ ಜೀವರಿಗೆ ತಾ ತಪ್ಪದೆ
ಪ್ರೀತಿಲಿ ಉಣಿಸಿ ಅಜಾತನಾಗಿ ಇಪ್ಪ
ಮಾತು ಮಾತಿಗೆ ಅನಂತ ಕರ್ಮಂಗಳು
ಜ್ಞಾತವಿಲ್ಲದೆ ಮಾಳ್ಪ ಜೀವರಿಗೆ ಇದು ಸಲ್ಲ
ಭೂತರುಗಳ ಗತಿ ತಾ ತಿಳಿದು ತ್ರಿವಿಧರಿಗೆ
ನೋತಫಲವಿತ್ತು ಸಮನಾಗಿ ಇಪ್ಪುವನೆಂದು
ಈ ತೆರದಿ ತಿಳಿದು ನೀ ಭೂತದಯಾ ಪುಷ್ಪ
ಪ್ರೀತಿಯಲಿ ಅರ್ಪಿಸನ್ಯಥಾ ಚಿಂತಿಸದೆ
ದಾತ ನಮ್ಮ ಸ್ವಾಮೀ ಗೋಪಾಲವಿಟ್ಠಲ
ಸೋತೆನೆಂದ ಬಳಿಕ ಸಲಹದೆ ಬಿಡನು ||೪||

ತ್ರಿಪುಟ ತಾಳ
ಸರ್ವದಾ ಕ್ಷಮೆ ಪುಷ್ಪ ಸರ್ವೆಶಗಲ್ಲದೆ
ಗರ್ವ ತತ್ವದಿ ಬದ್ಧ ಜೀವರಿಗೆ ಸಲ್ಲ
ಶರ್ವನಲ್ಯಾದರು ಸಹಿಸಿಲ್ಲ ಈ ಕರ್ಮ
ಪೂರ್ವದ ಆಖ್ಯಾನ ಇದಕುಂಟು
ಸರ್ವ ಉತ್ತಮ ದೇವನಾರೆಂದು ಭೃಗು ಮುನಿ
ಸರ್ವಪೂರ್ಣ ಹರಿಯ ಎದಿಯ ವದ್ದ
ಪರ್ವತದೋಪಾದಿ ಇದ್ದ ಕಾರಣವಾಗಿ
ಸರ್ವೋತ್ತಮನೆಂದು ತುತಿಸಿ ನಲಿದಾ
ನಿರ್ವ್ಯಾಜದಿಂದಲಿ ನಿತ್ಯ ಕೋಪದಿ ಖೇದ
ಗರ್ವ ತತ್ವದಿ ಬದ್ಧ ಜನರಿಗೆ ಕೂಡದು
ಸರ್ವಾನಂದ ಪೂರ್ಣ ಗೋಪಾಲವಿಠಲ
ಸರ್ವೇಶಗೀ ಪುಷ್ಪ ಅರಿವ ಜೀವನೆ ಧನ್ಯ ||೫||

ಅಟ್ಟ ತಾಳ
ದಮ ಜ್ಞಾನ ಧ್ಯಾನವು ಸಮೀಚೀನ ಪುಷ್ಪವು
ರಮೆ ಈಶಗಲ್ಲದೆ ಶ್ರಮಿಸೋ ಜೀವರಿಗಿಲ್ಲಾ
ವಮನ ಕಂಡರೆ ಅಂಜೋ ಭ್ರಮಣ ಜೀವರಿಗೆ
ದಮ ಎಂಬ ಪುಷ್ಪವು ಎಂತು ದೊರೆಯುವದಯ್ಯಾ
ಮಮತಿ ಜಡದಿ ನಿಮಿಷ ಬಿಡದೆ ಇದ್ದ
ಹಮ್ಮತಿ ಜೀವನಿಗೆ ಜ್ಞಾನಪುಷ್ಪವು ಎಂತೋ
ಕ್ಷಮಿಸಿ ನೋಡಲು ಧ್ಯಾನಪುಷ್ಪ ವೆಂಬೋದು ಅಂತು
ನಿಮಿತ್ತ ಮಾತ್ರವು ಇದು ನೀಚ ಜೀವರಗಿಲ್ಲ
ಸಮ್ಮತಿಸಿ ನೋಡಿವು ಸರ್ವೋತ್ತಮನಲ್ಲವೇ
ನಿಮಿಷ ಬಿಡದೆ ಇಪ್ಪವೆಂದು ಚಿಂತನೆ ಮಾಡೆ
ದಮಜ್ಞಾನ ಧ್ಯಾನವುಳವನಾಗುವನಾ ಜೀವ
ಸುಮನಸರೊಡಿಯ ಗೋಪಾಲವಿಟ್ಠಲನು
ನಮಿಸಿ ನೆಚ್ಚಿದಂಗಿನ್ನರಿಸುವನಿದಿರಾ ||೬||

ಆದಿ ತಾಳ
ಸತ್ಯವೆಂಬುವ ಪುಷ್ಪ ಸರ್ವೆಶಗೆ ಇದು
ನಿತ್ಯ ಅನೃತ ನುಡಿವ ಜೀವಗೆ ಸಲ್ಲ
ಕತ್ತಲೆ ಒಳಗಿದ್ದ ಮತ್ತೆ ಉದಯವೆಂಬೋ
ಮಿಥ್ಯ ವಚನವಾಡಿ ಸುತ್ತುವ ಸಂಸಾರ
ಮತ್ತೆ ಇವಗೀ ಪುಷ್ಪ ಎಂತು ದೊರುವದಯ್ಯಾ
ಸತ್ಯ ಸಂಕಲ್ಪ ನಮ್ಮ ಗೋಪಾಲವಿಠ್ಠಲಗೆ
ಮತ್ತೆ ನೀ ಉಂಟೆಂದು ಮನಮುಟ್ಟಿ ತಿಳಿಯೋ ||೭||

ಜತೆ
ಭೇದವಿಲ್ಲದೀ ಪುಷ್ಪ ಇಪ್ಪವು ಹರಿಯಲ್ಲಿ
ಸಾಧಿಸರ್ಚಿಸು ಗೋಪಾಲವಿಟ್ಠಲ ಒಲಿವಾ ||೮||

ಈ ಭಾವಾಷ್ಟ ಪುಷ್ಪಗಳು ಅಂದರೆ ಅವು ಸಾರ್ವಕಾಲಿಕ ಸತ್ಯಗಳು ಅಥವಾ ಅವು ಪ್ರಿನ್ಸಿಪಲ್ಲುಗಳು ಅಂತ ವೈದ್ಯರು ಹೇಳುತ್ತಿರುತ್ತಾರೆ. ಈ ಅಷ್ಟ ಪುಷ್ಪಗಳು ನಮ್ಮ ಭಾವದಲ್ಲಿ ಅರಳಬೇಕು, ಅವನ್ನು ಅವನಿಗೇ ಸಮರ್ಪಿಸಬೇಕು ಎನ್ನುವದು ಇಲ್ಲಿಯವರೆಗೆ ತಿಳಿದದ್ದು.

ಗೋಪಾಲ ದಾಸರು ಸುಳಾದಿಯಲ್ಲಿ ಹೇಳುವದು ಆ ಅಷ್ಟ ಪುಷ್ಪಗಳು ಇರುವದು ಆ ದೇವನಲ್ಲಿ ಮಾತ್ರವೇ ಎಂದು ತಿಳಿದುಕೊಂಡು ಅರ್ಚಿಸು ಅಂತ. ಮೊದಮೊದಲು ಇದನ್ನು ಓದುತ್ತಿರುವಾಗ ಅನಿಸಿದ್ದು, ಈ ಪುಷ್ಪಗಳು ದೇವನಲ್ಲಿ ಮಾತ್ರ ಎಂದರೆ ಮನುಷ್ಯ ಮಾತ್ರರು ತಮ್ಮ ಭಾವ ಶುದ್ಧಿಗಾಗಿ ಇವುಗಳನ್ನು ಸಾಧಿಸುವದು ಸಾಧ್ಯವೇ ಇಲ್ಲವೇ ಅನಿಸತೊಡಗಿತು.

ನಂತರ ನಿಧಾನವಾಗಿ ಯೋಚಿಸಿದಾಗ ಈ ಅಷ್ಟ ಪುಷ್ಪಗಳೂ ಆ ದೇವನ ಗುಣಗಳೇ ಎಂದೂ ಮತ್ತು ಅವನ ಗುಣಗಳಿಗೂ, ಅವನಿಗೂ ವ್ಯತ್ಯಾಸವೇ ಇಲ್ಲ ಎಂಬುದನ್ನ ಈ ಸುಳಾದಿಯಲ್ಲೂ ಹೇಳುತ್ತಿದ್ದಾರೆ ಗೋಪಾಲದಾಸರು ಅನಿಸಿತು. ಸುಮಧ್ವ ವಿಜಯದ ಶ್ಲೋಕದಲ್ಲಿ ಮಧ್ವಾಚಾರ್ಯರು ಭಾವಾಷ್ಟ ಪುಷ್ಪಗಳಿಂದ ತಮ್ಮ ಅಂತರಂಗದಲ್ಲಿ ದೇವನನ್ನು ಪೂಜಿಸುತ್ತಾರೆ ಎನ್ನುವದು ಅವನ ಗುಣಗಳಿಂದಲೇ ಅವನನ್ನು ಪೂಜಿಸುವ ವಿಶಿಷ್ಟ***  ಪೂಜೆಯನ್ನು ತಿಳಿಸುತ್ತದೆಯೋ ಅನಿಸಿತು.

ಮತ್ತೆ ವೈದ್ಯರ ಹತ್ತಿರ ಮಾತಾಡುವಾಗ ಅವರು ಹೇಳಿದ್ದು, ಪೂಜೆಗೆ ಹೂವುಗಳು ಅರಳಬೇಕು. ಭಾವದಲ್ಲಿ ಈ ಹೂವುಗಳು ಅರಳಬೇಕು. ಇವುಗಳ ಅರಳುವಿಕೆ ಪೂರ್ಣ ಪ್ರಮಾಣದಲ್ಲಿ ಆಗುವದು ದೇವನಲ್ಲಿ ಮಾತ್ರ. ಜೀವರಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಇವು ಅರಳುವದು ಮಧ್ವಾಚಾರ್ಯರಲ್ಲಿ (ಬ್ರಹ್ಮ ವಾಯುಗಳಲ್ಲಿ).

ಮಹಾಭಾರತದಲ್ಲಿ ಭೀಮಸೇನ ದೇವರ ಪೂಜೆಯ ವೇಳೆಗೆ ಹೇಳುತ್ತಿದ್ದ ಎನ್ನುವ ಶ್ಲೋಕವೊಂದರ ಉಲ್ಲೇಖವೂ ಇದೆ ಎಂದು ಈ ಶ್ಲೋಕವನ್ನೂ ತಿಳಿಸಿದರು. ಅವರೊಡನೆ ಫೋನಿನಲ್ಲಿ ಮಾತನಾಡುವಾಗ ಇದನ್ನು ಬರೆದಿಟ್ಟುಕೊಂಡಿರಲಿಲ್ಲವಾದರೂ ಅದೇ ಶ್ಲೋಕವನ್ನು ಪ್ರಭಂಜನಾಚಾರ್ಯರೂ ಉಲ್ಲೇಖಿಸಿದ್ದರಿಂದ, ನನ್ನ ಹತ್ತಿರದ ಪುಸ್ತಕದಲ್ಲಿ ಸಿಕ್ಕಿತು.

ಆರಾಧಯಾಮಿ ಮಣಿಸನ್ನಿಭಮಾತ್ಮಬಿಂಬಂ ಮಾಯಾಪುರೇ ಹೃದಯಪಂಕಜಸನ್ನಿವಿಷ್ಟಮ್
ಶ್ರದ್ಧಾನದೀವಿಮಲಚಿತ್ತಜಲಾಭಿಷೇಕಂ ಭಾವಾಷ್ಟಪುಷ್ಪವಿಧಿನಾ ಹರಿಮರ್ಚಯಾಮಿ

ಮುಂದೆ ಮಾತನಾಡುತ್ತ ಅವರು ಇನ್ನೊಂದು ಶ್ಲೋಕ ತಿಳಿಸಿದರು. ಅದರಲ್ಲಿ ಎಂಟು ಹೂವುಗಳಲ್ಲಿ ಸ್ವಲ್ಪ ವ್ಯತ್ಯಾಸವಿದೆ. ಎರಡೂ ಶ್ಲೋಕಗಳನ್ನೂ ನಾರಾಯಣ ಪಂಡಿತರೇ ಉಲ್ಲೇಖಿಸಿದ್ದಾರೆ ಎಂದು ತಿಳಿಸಿದರು. ಆ ಎಂಟು ಪುಷ್ಪಗಳು, ಅಹಿಂಸೆ, ಸತ್ಯ, ಅಸ್ತೇಯ, ಬ್ರಹ್ಮಚರ್ಯ, ಅಪರಿಗ್ರಹ, ಶೌಚ, ತುಷ್ಟಿ, ಸರ್ವಸಮರ್ಪಣ.

(***ವ್ಯತಿರೇಕ ಮತ್ತು ಅನ್ವಯ ಪೂಜೆಗಳ ಬಗ್ಗೆ ಜಗನ್ನಾಥ ದಾಸರು ಹರಿಕಥಾಮೃತಸಾರದಲ್ಲಿ ಹೇಳುತ್ತಾರೆ. ಬಿಡಿ ಬಿಡಿಯಾಗಿ ಉಪಕರಣಗಳಿಂದ, ಹೂವುಗಳಿಂದ, ದೇವರನ್ನು ಪೂಜಿಸುವ ವ್ಯತಿರೇಕ ಪೂಜೆ ಮತ್ತು ಎಲ್ಲದರಲ್ಲೂ ಎಲ್ಲೆಲ್ಲೂ ಅಡಕವಾಗಿರುವ ದೇವರನ್ನು ನೆನೆಯುತ್ತ, ಅವನೇ ತುಂಬಿರುವ ವಸ್ತುಗಳಿಂದ ಅವನನ್ನು ಪೂಜಿಸುವ ಅನ್ವಯ ಪೂಜೆಗಳ ಬಗ್ಗೆ ತಿಳಿಸುತ್ತಾರೆ. ಇಲ್ಲಿ ಅವನ ಗುಣಗಳಿಂದಲೇ ಅವನ ಪೂಜೆ ಮಾಡುತ್ತಾರೆ ಎಂಬುದು ಈ ಅನ್ವಯ ಪೂಜೆಯ ಮುಂದುವರೆದ ಘಟ್ಟವ? ಇದರ ಬಗ್ಗೆ ಮಾತನಾಡಬೇಕು.)

ಓದುವ ಹವ್ಯಾಸ

ನನಗೆ ಓದುವ ಚಟ ಯಾವಾಗಿನಿಂದ ಶುರು ಆಯಿತೋ ನೆನಪಿಲ್ಲ. ಕತೆ ಕೇಳುವ ಹುಚ್ಚು ಬಹಳ ಇದ್ದದ್ದು ನೆನಪಿದೆ. ನಿನಗೆ ಕತೆ ಹೇಳ್ತಾ ಹೇಳ್ತಾ ನಿದ್ದೆ ಹತ್ತಿ ನಿದ್ದೆಯಲ್ಲಿ ಫಿಸಿಕ್ಸ್ ಹೇಳಲಿಕ್ಕೆ ಶುರು ಮಾಡ್ತಿದ್ರು ನಿಮ್ಮಪ್ಪ ಅಂತ ಹೇಳ್ತಿರ್ತಾಳೆ ಅಮ್ಮ. ಬೇರೆ ಬೇರೆ ಕತೆ ಹೇಳಿ ಬೇಸತ್ತು ಕಡೆಗೆ, ‘ಒಂದು ಗುಬ್ಬಿ ಬಂತು, ಒಂದು ಕಾಳು ತೊಗೊಂಡು ಹೋಯಿತು, ಇನ್ನೊಂದು ಗುಬ್ಬಿ ಬಂತು ಇನ್ನೊಂದು ಕಾಳು ತೊಗೊಂಡು ಹೋಯ್ತು’ ಅಂತ ಮುಗಿಯಲಾರದ ಕತೆ ಹೇಳಿದರೆ ಅದಕ್ಕೂ ಹೂ ಅಂತಿದ್ದೆ ನೀನು ಅಂತ ಅಪ್ಪ ಹೇಳ್ತಿದ್ದರು. ಕತೆ ಕೇಳುವ ಈ ಚಟವೇ ಮುಂದೆ ಓದುವ ಚಟಕ್ಕೆ ಇಂಬು ಕೊಟ್ಟಿರಬೇಕು. ಬಾಲಮಿತ್ರ, ಚಂದಮಾಮ, ಅಮರಚಿತ್ರ ಕತೆಗಳು ಮತ್ತು ರಜಾ ದಿನಗಳಲ್ಲಿ ಧಾರವಾಡದ ದೊಡ್ಡಪ್ಪನ ಮನೆಯಲ್ಲಿ ಓದಿದ ಭಾರತ-ಭಾರತಿಯ ಹಲವಾರು ಅಂಗೈ ಅಗಲದ ಪುಸ್ತಕಗಳೂ ಈ ಚಟಕ್ಕೆ ಆಹಾರ ಒದಗಿಸಿದವು. ಚಿಕ್ಕವನಿದ್ದಾಗಲೇ ಒಮ್ಮೆ ಕುಕನೂರಿನ ಅಜ್ಜಿ ತಾತರ ಮನೆಯಲ್ಲಿ ಸತ್ಯನಾರಾಯಣ ಪೂಜೆಯ ನಂತರ ಸತ್ಯನಾರಯಣ ಕತೆಯನ್ನು ಓದಲು ನನಗೇ ಹೇಳಿದಾಗ ಖುಷಿಯಿಂದ ಓದಿದ್ದೆ. ಅದನ್ನು ಎಲ್ಲರೂ ಮೆಚ್ಚಿದ್ದು ಕೋಡು ಮೂಡಿಸಿತ್ತು! ಈಗ ನನ್ನ ಮಗ ಕತೆ ಕೇಳುವದನ್ನು, ಅವನ ಕತೆ ಪುಸ್ತಕಗಳಿಂದ ಕತೆಗಳನ್ನು ಓದಲು ಯತ್ನಿಸುವದನ್ನೂ ನೋಡಿದಾಗ ಇದೆಲ್ಲ ನೆನಪಾಗುತ್ತದೆ. ಎಷ್ಟೆಲ್ಲ ಹಿರಿಯರು ಎಷ್ಟೊಂದು ರೀತಿಯಲ್ಲಿ ನನ್ನ ಹವ್ಯಾಸ ಹುಟ್ಟಲು ಹಾಗೂ ಬೆಳೆಯಲು ಕಾರಣರಾಗಿದ್ದಾರೆ, ಅವರೆಲ್ಲರ ಬಗೆಗೂ ಅಪಾರ ಮೆಚ್ಚುಗೆ ಮತ್ತು ಹೆಮ್ಮೆ.

(ಮೊನ್ನೆ ಲೈಬ್ರರಿಯಲ್ಲಿ ಚೈನೀಸ್ ಹೊಸ ವರ್ಷದ ಪ್ರಯುಕ್ತ, ಡ್ರಾಗನ್ ಧ್ವಜ ಮಾಡುವ ‘ಕ್ರಾಫ್ಟ್’ ಸಮಯವಿತ್ತು. ಅಲ್ಲಿ ಈ ಬುಕ್ ಮಾರ್ಕರ್ ಇಟ್ಟಿದ್ದರು.)

ಇಲ್ಲಿ ಅಮೇರಿಕದ ಲೈಬ್ರರಿಗಳಲ್ಲಿ ನಿಯಮಿತವಾಗಿ ‘ಸ್ಟೋರಿ ಟೈಮ್’ ಗಳಿರುತ್ತವೆ. ಅದರಲ್ಲಿ ಹಾವ ಭಾವಗಳೊಡನೆ, ಕತೆಯ ಪಾತ್ರಗಳಂತೆ ಮಾತನಾಡುತ್ತ, ಕತೆಗಳನ್ನು ಓದುವ, ಓದುತ್ತಲೇ ಅಭಿನಯಿಸುವ ಸ್ಟೋರಿ ಟೈಮುಗಳು ನನ್ನ ಮಗನಿಗೆ ಇಷ್ಟ. ಅವನಿಗೆ ಪುಸ್ತಕ ಪ್ರೀತಿ ಹುಟ್ಟಲು ಈ ಕಥಾ ಸಮಯಗಳು ಬಹಳ ಸಹಾಯ ಮಾಡುತ್ತಿವೆ. ಕಥೆ ಹೇಳುವದರ ಜೊತೆಗೆ ಒಂದಷ್ಟು ಹಾಡು, ಕುಣಿತವನ್ನೂ ಮಾಡಿಸುತ್ತಾರೆ. ಎಷ್ಟೋ ರೈಮುಗಳನ್ನ, ಅವುಗಳಿಗೆ ತಕ್ಕಂತೆ ಕುಣಿಯುವದನ್ನ ಇಲ್ಲಿಂದಲೇ ಕಲಿಯುತ್ತಾನೆ. ನಾವೂ ಮನೆಯಲ್ಲಿ ಅದನ್ನ ಅನುಕರಿಸಬಹುದು. ಕಥಾ ಸಮಯದ ನಂತರ ಲೈಬ್ರರಿಯಿಂದ ಹಲವು ಪುಸ್ತಕಗಳನ್ನ ಹೆಕ್ಕಿಕೊಂಡು ಬಂದು ಮನೆಯಲ್ಲಿ ಓದುವ ಅಭ್ಯಾಸಕ್ಕೆ ಒತ್ತಾಸೆ ಕೊಡುತ್ತವೆ ಈ ಸ್ಟೋರಿ ಟೈಮುಗಳು.

ಓದಿ, ನೋಡಿ ತಿಳಿದ ತಿಳವು ನಿತ್ಯದ ನಡವಳಿಕೆಯನ್ನೂ ಬದಲಾಯಿಸಬಲ್ಲದು. ಪುಸ್ತಕಗಳಿಲ್ಲದೇ ಹೇಳುತ್ತ ಹೋಗುವ ಕತೆಗಳು ಅವರದೇ ಚಿತ್ರಣಗಳನ್ನು ಮನಸ್ಸಿನಲ್ಲಿ ಕಲ್ಪಿಸಿಕೊಳ್ಳುತ್ತ ಹೋಗುವಲ್ಲಿ ಸಹಾಯ ಮಾಡಿದರೆ, ಚಿತ್ರ ಸಮೇತವಿದ್ದ ಪುಸ್ತಕಗಳಿಂದ ಓದಿದ ಕತೆಗಳು ಓದುವುದರ ಸ್ಪಷ್ಟ ಚಿತ್ರಣವನ್ನು ಕಣ್ಣೆದುರೇ ನಿಲ್ಲಿಸುವದರಿಂದ ಮಕ್ಕಳು ಕೆಲವೊಂದು ವಿಷಯಗಳನ್ನು ಬೇಗ ತಿಳಿದುಕೊಳ್ಳುತ್ತಾರೆ. ಇದರಿಂದ ಅಪ್ಪ ಅಮ್ಮಂದಿರಿಗೂ ಸಹಾಯವಾಗುತ್ತದೆ.

ಕಾರಿನ ಹಿಂದಿನ ಸೀಟಿನಲ್ಲಿ, ತನ್ನ ಸೀಟಿನಲ್ಲಿ, ಕೂತ ಮಗ ಏನಾದರೂ ಬೇಕು ಅಂತ ಹಟ ಮಾಡುವದು, ನಾವು ಕಾರ್ ನಿಂತ ಮೇಲೆ ಅದನ್ನು ಕೊಡುವದಾಗಿ ಹೇಳಿದರೂ ಅದು ತಿಳಿಯದೆ ಹೆಚ್ಚು ಹೆಚ್ಚು ಹಟ ಮಾಡುತ್ತಲೇ ಹೋಗುವದು ಸಾಮಾನ್ಯವಾಗಿತ್ತು ಮೊದಲು. ಆದರೆ, ‘ಶೀಪ್ ಇನ್ ದ ಜೀಪ್’ ಪುಸ್ತಕದಲ್ಲಿ ಎತ್ತಲೋ ನೋಡುತ್ತ ಜೀಪ್ ಓಡಿಸಿದ ಮೇಕೆಗಳ ಜೀಪು ಅಪಘಾತವಾಗಿ, ಅದು ನುಜ್ಜುಗುಜ್ಜಾಗಿ, ಚಕ್ರಗಳೂ, ಸ್ಟೀಯರಿಂಗೂ ಕಿತ್ತು ಹೊರಗೆ ಬಿದ್ದಿದ್ದ ಚಿತ್ರಗಳಿದ್ದ ಈ ಪುಸ್ತಕವನ್ನು ಓದಿದ ಮೇಲೆ ಸ್ವಲ್ಪ ಮೆತ್ತಗಾದ. ಕಾರು ನಿಲ್ಲುವವರೆಗೂ ಯಾಕೆ ಕಾಯಬೇಕು ಅನ್ನುವದು ತಿಳಿಯಿತು ಅವನಿಗೆ.

‘ಶೀಪ್ ಇನ್ ಅ ಜೀಪ್’ ಪುಸ್ತಕದ ಚಿತ್ರ ಹಾಕಲು ಗೂಗಲಿಸಿದಾಗ ಯಾರೋ ಅದನ್ನು ಓದಿದ ಯೂ ಟ್ಯೂಬಿನ ಈ ಲಿಂಕ್ ಸಿಕ್ಕಿತು.

ನಮ್ಮ ಮಗ ೩ ವರ್ಷದವನಾದಾಗ ಅವನ ವಾರ್ಷಿಕ ಚೆಕಪ್ಪಿಗೆ ಅಂತ ಅವನ ಡಾಕ್ಟರ್ ಹತ್ತಿರ ಹೋಗಿದ್ದಾಗ, ಅವರು ಕೊಟ್ಟ ಒಂದು ಮಾಹಿತಿ ಹಾಳೆಯಲ್ಲಿ ಜೇನ್ ಯೋಲೆನ್ ಬರೆದ ಈ ಪದ್ಯವಿತ್ತು. ಬಹಳ ಇಷ್ಟವಾಗಿ ಟೈಪಿಸಿ ಇಟ್ಟುಕೊಂಡಿದ್ದೆ.

Read to me riddles; read to me rhymes
Read to me stories of magical times
Read to me tales about castles and kings
Read to me stories of fabulous things
Read to me pirates, read to me knights,
Read to me dragons and dragon back flights
Read to me spaceships and cowboys and then
When you are finished, please read to me again.

             - by Jane Yolen; (Found this nice poem in one of the leaflets my son’s pediatrician gave us.)

**********************

ಪುಸ್ತಕಗಳಿಂದ ಓದಿ ಹೇಳುವ ಕತೆಗಳೇ ಹೆಚ್ಚಾದವು ಅನಿಸುತ್ತಿದೆ ಇತ್ತೀಚೆಗೆ. ಪುಸ್ತಕಗಳು ಎದುರಿಗೆ ಇಲ್ಲದೇ ಇದ್ದಾಗ, ಬಗೆ ಬಗೆಯ ಮಾಯಾಲೋಕದ, ಕಿನ್ನರರ, ಯಕ್ಷಿಣಿಗಳ ಲೋಕದ ಕತೆಗಳನ್ನ ವಿಸ್ತಾರವಾಗಿ ಹೇಳುತ್ತಾ ಹೋದಂತೆ ಅವನ್ನು ನನ್ನ ಮಗ ಹೇಗೆ ಕೇಳುತ್ತಾನೆ, ಅವುಗಳಿಂದ ತನ್ನಲ್ಲೇ ತಾನು ಆ ಲೋಕವನ್ನು ಕಟ್ಟಿಕೊಳ್ಳುತ್ತಾ ಹೋಗುತ್ತಾನಾ ಅಂತ ನೋಡಬೇಕು ಅನಿಸುತ್ತಿತ್ತು. ಒಂದಾನೊಂದು ಕಾಲಕ್ಕೆ ಬಹಳಷ್ಟು ಕತೆ ಕೇಳಿದ್ದೇನಾದ್ದರಿಂದ ಈಗ ಹೇಳಬಲ್ಲೆ ಅಂದುಕೊಂಡಿದ್ದು ಸುಳ್ಳೆಂದು ಸಾಬೀತಾಗಿದೆ. ನಾನು ಕೇಳಿದ ಕತೆಗಳ ಎಷ್ಟೋ ವಿವರಗಳು ನೆನಪಿಲ್ಲ ಅನಿಸುತ್ತಿದೆ. ಚಿಕ್ಕವನಿದ್ದಾಗ ಓದಿದಾಗ ಯಾಕೊ ಮತ್ತೆ ಮತ್ತೆ ಓದಬೇಕು ಅನಿಸಿರದಿದ್ದ ‘ಪಾತಾಳದಲ್ಲಿ ಪಾಪಚ್ಚಿ’ ಯ ಮೂಲ, ಅಲಿಸ್ ಇನ್ ವಂಡರ್ ಲ್ಯಾಂಡ್ ಪುಸ್ತಕವನ್ನು ಈಗ ದಿನವೂ ಸ್ವಲ್ಪ ಸ್ವಲ್ಪ ಓದಿ, ಅದರ ಕತೆಯನ್ನು ಮಗನಿಗೆ ಹೇಳುತ್ತಿರುವೆ. ಓದುತ್ತ ಹೋದಂತೆ, ನಾನು ಕನ್ನಡದಲ್ಲಿ ಇದನ್ನು ಓದಿದ್ದರ ನೆನಪಾಗುತ್ತಿದೆ ಮತ್ತು ಇದನ್ನ ಮತ್ತೆ ಮತ್ತೆ ಯಾಕೆ ಓದಲಿಲ್ಲ ಎನ್ನುವ ಪ್ರಶ್ನೆಯೂ ಬರುತ್ತಿದೆ. ಇದನ್ನ ಮೊದಲು ಕತೆಯಾಗಿ ಕೇಳಿದ್ದರೆ ಇದರೆ ಬಗ್ಗೆ ಹೆಚ್ಚಿನ ಆಸಕ್ತಿಯೇನಾದರೂ ಬರುತ್ತಿತ್ತೇ ಎನ್ನುವ ಪ್ರಶ್ನೆಯೂ ಮೂಡುತ್ತದೆ.