ವಿಮರ್ಶೆ

The transaction between writer and subject can easily be stage-managed for market­place effect — moments overplayed to guide readers to tears or elation or preordained insights — and prose often takes on the weight of sentimentality, the great enemy of good writing, as J. D. Salinger put it, giving something “more tenderness than God gives to it.”
- Against the Odds, NYTimes – Review of Tracy Kidder‘s book ‘Strength in What Remains

ನಮ್ಮ ವಾಕ್ಪಟುಗಳು ಟೋಸ್ಟ್ ಮಾಸ್ಟರ್ಸ್ ಕ್ಲಬ್ಬಿನ ಸಭೆಗಳಲ್ಲಿನ ಒಂದು ಮುಖ್ಯ ಅಂಗ ನಿಗದಿತ ಭಾಷಣಗಳ ವಿಮರ್ಶೆ. ಭಾಷಣ ಎಷ್ಟು ಪರಿಣಾಮಕಾರಿಯಾಗಿ ಬಂತು, ಭಾಷಣಕಾರ ಹೇಗೆ ವೇದಿಕೆಯನ್ನು ಬಳಸಿಕೊಂಡ, ಧ್ವನಿಯ ಏರಿಳಿತ ಎಷ್ಟು ಪರಿಣಾಮಕಾರಿಯಾಗಿತ್ತು, ಸಭಿಕರತ್ತ ನೋಡುತ್ತ, ಅವರಲ್ಲಿ ಕೆಲವರ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡಿದನೆ ಮುಂತಾದವುಗಳನ್ನು ಗಮನಿಸಿ ಅದನ್ನು ಭಾಷಣಕಾರನಿಗೆ ತಿಳಿಸುವದೇ ಈ ವಿಮರ್ಶಾ ವಿಭಾಗದ ಮುಖ್ಯ ಉದ್ದೇಶ. ಇದು ಭಾಷಣದ ವಿಮರ್ಶೆಯಲ್ಲ, ಬದಲಿಗೆ ಭಾಷಣ ಕಲೆಯ ವಿಮರ್ಶೆ. ಭಾಷಣದ ನಿಲುವು ವಿಮರ್ಶಕನ ನಿಲುವಿಗೆ ವಿರುದ್ಧವಾಗಿದ್ದರೂ ವಿಮರ್ಶಕ ಅಲ್ಲಿ ತನ್ನ ನಿಲುವಿನ ಕುರಿತು ಮಾತನಾಡುವಂತಿಲ್ಲ. ಬದಲಿಗೆ ಭಾಷಣಕಾರ ಎಷ್ಟು ಸಮರ್ಥವಾಗಿ ತನ್ನ ನಿಲುವನ್ನು ಮಂಡಿಸಿದ, ಇನ್ನೂ ಪರಿಣಾಮಕಾರಿಯಾಗಿ ಮಂಡಿಸಬಹುದಿತ್ತೇ ಎನ್ನುವದನ್ನು ತಿಳಿಸಬಹುದಷ್ಟೇ. ಒಟ್ಟಿನಲ್ಲಿ ವಿಮರ್ಶೆಯನ್ನು ಕೇಳಿದ ಮೇಲೆ ಇನ್ನಷ್ಟು ಸಮರ್ಥವಾಗಿ ಮತ್ತೊಂದು ಭಾಷಣವನ್ನು ಮಾಡುವ ಉತ್ಸಾಹ ಭಾಷಣಕಾರನಲ್ಲಿ ತುಂಬುವ ಹಾಗಿರಬೇಕು ವಿಮರ್ಶೆ.

ಇದಕ್ಕಾಗಿ ನಾವು ಬಳಸುವ ವಿಧಾನ, sandwich ವಿಧಾನ. ಇದರಲ್ಲಿ ಭಾಷಣ ಒಳ್ಳೆಯ ಅಂಶಗಳನ್ನು ಮೊದಲು ಎತ್ತಿ ಹೇಳುವದು, ನಂತರ ಭಾಷಣ ಇನ್ನಷ್ಟು ಚನ್ನಾಗಿ ಆಗಲು ಮಾಡಿಕೊಳ್ಳಬಹುದಾದ ಬದಲಾವಣೆಗಳನ್ನು ಸೂಚಿಸುವದು ಮತ್ತು ಕೊನೆಗೆ ಮತ್ತೊಮ್ಮೆ ಭಾಷಣದ ಒಳ್ಳೆ ಅಂಶಗಳನ್ನು ಹೇಳಿ, ಕೊನೆಯದಾಗಿ ಹೇಳಿದ್ದನ್ನೆಲ್ಲ ಪುಟ್ಟದಾಗಿ ಸಂಗ್ರಹಿಸಿ ಹೇಳುವದು. ಇದಕ್ಕೆಲ್ಲ ಇರುವ ಕಾಲಾವಕಾಶ ೨ ರಿಂದ ೩ ನಿಮಿಷ.

ಮೊದಮೊದಲು ಈ ರೀತಿ ಭಾಷಣಗಳ ವಿಮರ್ಶೆಯನ್ನು ಮಾಡುವದು ಸಾಧ್ಯವಾಗುತ್ತಿರಲೇ ಇಲ್ಲ. ಬೇಡವೆಂದರೂ ವಿಮರ್ಶೆ ಭಾಷಣದ ವಿಷಯವನ್ನೇ ವಿಮರ್ಶಿಸುತ್ತಿತ್ತು. ವಿಷಯ ವಿಮರ್ಶೆ ಒಂದು ಕೊನೆಯಾದರೆ ಭಾಷಣದಲ್ಲಿ ಕಾಣದ, ಅಥವಾ ಬಹಳ ಸೂಕ್ಷ್ಮವಾಗಿ ಕಂಡ ವಿಷಯಗಳನ್ನೇ ಎತ್ತಿಕೊಂಡು ಅದನ್ನೇ ಬಹಳಷ್ಟು ಹೊಗಳುವದು/ಟೀಕಿಸುವದು, ಇನ್ನೊಂದು ಕೊನೆ. ಟೋಸ್ಟ್ಮಾಸ್ಟರ್ಸ್ ನಡೆಸುವ ವಿಮರ್ಶಾ ಸ್ಪರ್ಧೆಗಳಲ್ಲಿ ತಮ್ಮ ವಿಮರ್ಶೆಯೇ ಚನ್ನಾಗಿರಬೇಕು ಎನ್ನುವ ಹಂಬಲದಲ್ಲಿ ಈ ಎರಡನೇ ಕೊನೆಯನ್ನು ಮುಟ್ಟಿಬಿಡುವ ಸಂಭವ ಹೆಚ್ಚು. ನಾನು ನೋಡಿದ ಒಂದು ಸ್ಪರ್ಧೆಯಲ್ಲಿ  ಹಾಗಾಯಿತು ಅಂತ ಅನಿಸಿತ್ತು. ಅದನ್ನು ತಪ್ಪಿಸುವದು ಹೇಗೆ ಮತ್ತು ಅದೇ ಸಮಯದಲ್ಲಿ, ಭಾಷಣದಲ್ಲಿ ಮೂಡಿದ ಒಳ್ಳೆಯ ಅಂಶಗಳನ್ನು ಎತ್ತಿ ಹಿಡಿದು, ಭಾಷಣದ ಶೈಲಿಯ ಕುಂದು ಕೊರತೆಗಳನ್ನು ಸಕಾರಾತ್ಮಕವಾಗಿ ತೋರಿಸಿಕೊಡುವದು ಹೇಗೆ ಎನ್ನುವ ಪ್ರಶ್ನೆ ನನ್ನನ್ನು ಪ್ರತೀ ಬಾರಿ ಕಾಡುತ್ತದೆ. ಹಾಗಾದಾಗಲೆಲ್ಲ ನಾನು ನೆನಪು ಮಾಡಿಕೊಳ್ಳುವದು ಈ ಮೇಲೆ ಕೊಟ್ಟ ನ್ಯೂ ಯಾರ್ಕ್ಟೈಮ್ಸಿನ ವಿಮರ್ಶೆಯೊಂದರ ಭಾಗ.

ಟ್ರೇಸಿ ಕಿಡ್ಡರ್ ಬರೆದ ಪುಸ್ತಕ ‘Strength In What Remains’ ನ ವಿಮರ್ಶೆ/ಪರಿಚಯ ಅದು. ಆ ಪುಸ್ತಕ ಬರುಂಡಿಯ ನರಮೇಧದಿಂದ ತಪ್ಪಿಸಿಕೊಂಡು ಪಾರಾಗಿ ಬಂದ ಡಿಯೋನ ಕತೆ. ಅದರಲ್ಲಿ ಬರುವ ನರಮೇಧದ ಚಿತ್ರಣವನ್ನ, ಅದನ್ನು ಎದುರಿಸಿ ಬಂದ ಡಿಯೋನ ಕತೆಯನ್ನು, ಎಲ್ಲೂ ಅತಿ ಹೆಚ್ಚಾಗಿ ಅಥವಾ ಅತಿ ಕಡಿಮೆಯಾಗಿ ಹೇಳದೇ matter of fact  ಎಂಬಂತೆ  ಟ್ರೇಸಿ ಕಿಡ್ಡರ್ ನಿರೂಪಿಸಿದ ಬಗೆಯ ಬಗ್ಗೆ ಆ ಮಾತನ್ನು ಹೇಳಿದ್ದಾನೆ ವಿಮರ್ಶಕ. ಆ ಪುಸ್ತಕವನ್ನು ಆಡಿಯೋ ಪುಸ್ತಕವಾಗಿ ಕೇಳಿ ಬಹಳಷ್ಟು ಪ್ರಭಾವಿತನಾದ ದಿನಗಳಲ್ಲಿ ಆ ಪುಸ್ತಕದ ಬಗ್ಗೆ ನಡೆಸಿದ ಗೂಗಲ್ ಹುಡುಕಾಟದಲ್ಲಿ ಸಿಕ್ಕ ಅಂಕಣದ ಈ ಭಾಗ ಬಹಳಷ್ಟು ಬಾರಿ ಉಪಯೋಗಕ್ಕೆ ಬಂದಿದೆ. ಇದು ಕತೆಗಾರನೊಬ್ಬ ಕತೆ ಹೇಳುವ ಕಲೆಯ ಬಗೆಗಿನ ಮಾತಾದರೂ ಇದನ್ನ ಭಾಷಣಗಳ ವಿಮರ್ಶೆಗೂ ಅನ್ವಯಿಸಬಹುದು ಅನಿಸುತ್ತದೆ ನನಗೆ

ಇತ್ತೀಚೆಗೆ ಯೂಟ್ಯೂಬಿನಲ್ಲಿ ಕೇಳಿದ ಈಶ್ವರಯ್ಯ ಅವರ  ಮಾತುಗಳು ಕೂಡ ವಿಮರ್ಶೆ ಹೇಗಿರಬೇಕು, ವಿಮರ್ಶಕನಿಗೆ ಯಾವುದರ ಎಚ್ಚರವಿರಬೇಕು ಎನ್ನುವದನ್ನು ಸ್ಪಷ್ಟಗೊಳಿಸುತ್ತದೆ. ಈಶ್ವರಯ್ಯನವರ ಯಾವೊಂದು ವಿಮರ್ಶೆಯನ್ನಾಗಲೀ, ಕತೆಯನ್ನಾಗಲೀ ನಾನು ಓದಿಲ್ಲ. ಆದರೆ ಅವರನ್ನು ಸನ್ಮಾನಿಸುವ ಈ ವಿಡಿಯೋಗಳನ್ನು ಉದಯವಾಣಿಯ ಯೂಟ್ಯೂಬ್ ಚನೆಲ್ಲಿನಲ್ಲಿ ಆಕಸ್ಮಿಕವಾಗಿ ನೋಡಿದೆ. ಪ್ರತಿಯೊಬ್ಬ ವಿಮರ್ಶಕನಿಗೂ ಇವರ ಮಾತುಗಳು ದಾರಿದೀಪವಾಗಿವೆ.

ಈಶ್ವರಯ್ಯನವರು ಹೇಳುತ್ತಾರೆ, ಕಲೆ ಮತ್ತು ವಿಮರ್ಶೆಯೆಂಬುವು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ವಿಮರ್ಶೆಯೆಂದರೆ ಟೀಕೆಯಲ್ಲ, ಬಯ್ಗಳಲ್ಲ, ಅದು ಸಹೃದಯದ constructive criticism, ಅದು ಮಾರ್ಗದರ್ಶಕವಾಗಿ ಇರಬೇಕು. ವಿಮರ್ಶಕ ಯಾವತ್ತಿದ್ದರೂ ಕಲೆಯ ಹಿಂದೆ ಹೋಗುವನು, ಕಲೆಯ ಸೃಷ್ಟಿಕರ್ತನಲ್ಲ. ಕಲೆ ನಡೆದು ಬಂದ ಹಾದಿಯನ್ನು ಹೇಳಬಲ್ಲ. ಕಲೆಯ ಪರಂಪರೆಯನ್ನು ಗುರುತಿಸಿ ತಿಳಿಸಬಲ್ಲ, ತಾತ್ವಿಕವಾಗಿ ಅದು ಹೀಗೆ ಮುಂದುವರಿಯಬೇಕು ಎಂದು ಹೇಳಬಲ್ಲ, ಅಷ್ಟೆ ಎನ್ನುತ್ತಾರೆ. ವಿಮರ್ಶಕನ ಜವಾಬ್ದಾರಿಯನ್ನು, ಇತಿ ಮಿತಿಗಳನ್ನು ಇಷ್ಟು ಸ್ಪಷ್ಟವಾಗಿ ಹೇಳಿದ್ದು ಕೇಳಿ ಖುಷಿಯಾಯಿತು.

ಕೆಳಗಿನ ಯೂಟ್ಯೂಬಿನ ಲಿಂಕಿನಲ್ಲಿ ಅವರ ಮಾತುಗಳಲ್ಲೇ ಕೇಳಬಹುದು. ವಿಮರ್ಶೆಯ ಬಗೆಗಿನ ಮಾತುಗಳು ೭ ನಿಮಿಷ ೪೦ ಸೆಕೆಂಡುಗಳ ನಂತರ ಬರುತ್ತವೆ.

Posted on January 14, 2012, in ಓದು, ಕೇಳಿದ್ದು and tagged , , , . Bookmark the permalink. Leave a Comment.

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Connecting to %s

Follow

Get every new post delivered to your Inbox.

Join 58 other followers