ಎರಡು ಪದ, ಮೂರು ಪುಸ್ತಕ, ಒಂದಷ್ಟು ಲಿಂಕು, ಪುರಂದರದಾಸರ ಪುಣ್ಯದಿನಕ್ಕೆ…
ದಾಸರ ಪದಗಳ ಭಜನೆಗಳನ್ನ ಕೇಳುವದು ಮತ್ತು ಅವುಗಳಲ್ಲಿ ಭಾಗವಹಿಸುದು ನನಗೆ ಬಹಳ ಇಷ್ಟವಾಗುತ್ತದೆ. ಯಾವಾಗಿನಿಂದ ಇದು ಶುರುವಾಯಿತು ಅನ್ನುವದು ನೆನಪಿನಲ್ಲಿಲ್ಲ, ಆದರೆ ಈ ಅಭಿರುಚಿ ಬೆಳೆಯಲಿಕ್ಕೆ ಚಿಕ್ಕಂದಿನ ರಜಾ ದಿನಗಳಲ್ಲಿ ನಮ್ಮ ಅಮ್ಮನ ತವರೂರು ಕುಕನೂರಿಗೆ ಹೋದಾಗ ಅಲ್ಲಿ ಪ್ರತಿ ಗುರುವಾರ ಸಂಜೆ ನಡಯುತ್ತಿದ್ದ ಭಜನೆ ಬಹಳ ಮುಖ್ಯ ಪಾತ್ರವಹಿಸಿರಬೇಕು ಅನಿಸುತ್ತದೆ. ನಮ್ಮ ಅಜ್ಜಿ ತಾತರ ಮನೆಯಲ್ಲಿ ರಾಯರ (ರಾಘವೇಂದ್ರ ಸ್ವಾಮಿಗಳ) ಬೃಂದಾವನವಿದ್ದದ್ದರಿಂದ, ಪ್ರತಿ ಗುರುವಾರ ಬೆಳಗಿನ ಹೊತ್ತು ಗಂಡಸರೆಲ್ಲ ಸೇರಿ ರಾಯರ ಅಷ್ಟೋತ್ತರ ಪಾರಾಯಣ ಮಾಡಿದರೆ ಸಂಜೆಗೆ ಹೆಂಗಸರು ಭಜನೆ ಮಾಡುತ್ತಿದ್ದರು. ಇವೆರಡು ಚಿತ್ರಗಳು ಯಾವತ್ತೂ ಮರೆಯುವದಿಲ್ಲ.ಆ ದಿನಗಳಲ್ಲಿ ಭಜನೆಗಳಲ್ಲಿ ಕೇಳಿದ ‘ನಮಃ ಪಾರ್ವತಿ ಪತಿ ನುತ ಜನ ಪರ namO ವಿರೂಪಾಕ್ಷ’, ‘ಪವಮಾನ ಪವಮಾನ ಜಗದ ಪ್ರಾಣ’, ಮೊದಲಾದ ಹಾಡುಗಳು ಇವತ್ತೂ ಆ ನೆನಪುಗಳನ್ನು ತರುತ್ತವೆ.
ಭಜನೆಗಳಲ್ಲಿ ಪಾಲ್ಗೊಳ್ಳಲು ಇಲ್ಲಿ ಅಮೆರಿಕದಲ್ಲೂ ಸಾಧ್ಯವಾದದ್ದು ‘ಶ್ರೀ ವ್ಯಾಸ ಭಜನಾ ಮಂಡಳಿ’ಯ ಸಂಪರ್ಕವಾದ ನಂತರ. ಪ್ರತೀ ಏಕಾದಶಿಗೊಮ್ಮೆ, ಹಬ್ಬ ಹರಿದಿನಗಳಂದು, ದಾಸರ ಪುಣ್ಯ ತಿಥಿಗಳಂದು, ಹೀಗೆ ಅವಕಾಶವಾದಗಲೆಲ್ಲ ನಡೆಯುವ ಭಜನೆಗಳಲ್ಲಿ ಪಾಲ್ಗೊಂಡು ಬಹಳ ಖುಷಿಪಟ್ಟಿದ್ದೇನೆ. ಪ್ರತೀ ಬಾರಿಯೂ ಭಾಗವಹಿಸಲು ಆಗದಿದ್ದರೂ, ಅವಕಾಶವಾದಾಗ ತಪ್ಪಿಸುವದಿಲ್ಲ. ಇವತ್ತು ಪುರಂದರ ದಾಸರ ಪುಣ್ಯ ದಿನದ ನಿಮಿತ್ತ ಇದ್ದ ಭಜನೆಯಲ್ಲಿ ಪಾಲ್ಗೊಳ್ಳಲು ಆಗಲಿಲ್ಲ. ಈಗ ಅದೇ ನೆಪದಲ್ಲಿ ಭಜನೆಯ ಬಗ್ಗೆ ನಾಲ್ಕು ಮಾತು ಬರೆಯುತ್ತಿರುವೆ. ಈ ಭಜನೆಗಳಲ್ಲಿ ಎಷ್ಟೋ ಹೊಸ ಹಾಡುಗಳನ್ನು ಕೇಳಿದ್ದೇನೆ. ಮೊದಲ ಬಾರಿಗೆ ಇಷ್ಟವಾದವು ಎಷ್ಟೋ ಹಾಡುಗಳು. ಎರಡು ವಾರಗಳ ಹಿಂದೆ ವೈಕುಂಠ ಏಕಾದಶಿ ನಿಮಿತ್ತದ ಭಜನೆಯಲ್ಲಿ ಪುರಂದರ ದಾಸರ ಒಂದು ಪದವನ್ನು ಕೇಳಿದೆ. ಅದು ಎಷ್ಟು ಇಷ್ಟವಾಯಿತೆಂದರೆ, ಹಾಡಿನ ಪುಸ್ತಕದಲ್ಲಿ ಆ ಪುಟದ ಚಿತ್ರವನ್ನು ಫೋನಿನ ಕ್ಯಾಮರಾದಲ್ಲಿ ಸೆರೆಹಿಡಿದು ತಂದೆ. ಆ ಹಾಡು ಇದು (ಫೋಟೋದಿಂದ ಟೈಪಿಸದೆ ಗೂಗಲಿಸಿದಾಗ ಇಲ್ಲಿ ಸಿಕ್ಕಿದ್ದನ್ನು ಪೇಸ್ಟಿಸಿದೆ
),
ಕನಸು ಕಂಡೇನ ಮನದಲಿ ಕಳವಳಗೊಂಡೇನ ||ಪ||
ಏನ ಹೇಳಲಿ ತಂಗಿ ತಿಮ್ಮಯ್ಯನ ಪಾದವನು ಕಂಡೆ ||ಅ.ಪ||ಪೋನ್ನದ ಕಡಗನಿಟ್ಟು ತಿಮ್ಮಯ್ಯ ತಾ | ಪೋಲ್ವನಾಮವನಿಟ್ಟು |
ಅಂದುಗೆ ಘಲುಕೆನ್ನುತಾ ಎನ್ನಮುಂದೆ | ಬಂದು ನಿಂತಿದ್ದನಲ್ಲೇ ||೧||ಮಕರ ಕುಂಡಲನಿಟ್ಟು ತಿಮ್ಮಯ್ಯ ತಾ | ಕಸ್ತೂರಿ ತಿಲಕನಿಟ್ಟು |
ಗೆಜ್ಜೆ ಘಲುಕೆನುತಾ ಸ್ವಾಮಿ ತಾ | ಬಂದು ನಿಂತಿದ್ದನಲ್ಲೇ ||೨||ಮುತ್ತಿನ ಪಲ್ಲಕ್ಕಿ ಯತಿಗಳು | ಹೊತ್ತು ನಿಂತಿದ್ದರಲ್ಲೇ |
ಛತ್ರಚಾಮರದಿಂದ ರಂಗಯ್ಯನ | ಉತ್ಸವ ಮೂರುತಿಯ ||೩||ತಾವರೆ ಕಮಲದಲಿ ಕೃಷ್ಣಯ್ಯ ತಾ | ಬಂದು ನಿಂತಿದ್ದನಲ್ಲೇ |
ವಾಯುಬೊಮ್ಮಾದಿಗಳು ರಂಗಯ್ಯನ | ಸೇವಯ ಮಾಡುವರೆ ||೪||ನವರತ್ನ ಕೆತ್ತಿಸಿದ | ಸ್ವಾಮಿ ಎನ್ನ | ಹೃದಯಮಂಟಪದಲ್ಲಿ |
ಸರ್ವಾಭರಣದಿಂದ ಪುರಂದರ | ವಿಠಲನ ನೋಡಿದೆನೇ ||೫||
ಗುರು ಪುರಂದರ ದಾಸರೇ ನಿಮ್ಮ ಚರಣ ಕಮಲವ ನಂಬಿದೆ ||ಪ||ಗರುವ ರಹಿತನ ಮಾಡಿ ಎನ್ನನು ಪೊರೆವ ಭಾರವು ನಿಮ್ಮದೇ ||ಅ.ಪ||ಒಂದು ಅರಿಯದ ಮಂದಮತಿ ನಾ | ನಿಮ್ಮದು ನಿಮ್ಮನು ನಂಬಿದೆ |ಇಂದಿರೇಶನ ಪಾದ ತೋರಿಸೋ ತಂದೆ ಮಾಡೆಲೋ ಸತ್ಕ್ರುಪೆ ||೧||ಮಾರಜನಕನ ಸನ್ನಿಧಾನದಿ | ಸಾರಗಾಯನ ಮಾಡುವ |ನಾರದರೆ ಈ ರೂಪದಿಂದಲಿ ಕೋರೆ ದರುಶನ ತೋರಿದೆ ||೨||ಪುರಂದರಾಲಯ ಘಟ್ಟದೊಳು ನೀ | ನಿರುತ ಧನವ ಗಳಿಸಲು |ಪರಮ ಪುರುಷನು ವಿಪ್ರನಂದದಿ | ಕರವ ನೀಡಿ ಯಾಚಿಸೆ ||೩||ಪರಮ ನಿರ್ಗುಣ ಮನವನರಿತು | ಸರುವ ಸೂರಿಯ ಗಯಿಸಿದ |ಅರಿತು ಮನದಲಿ ಜರಿದು ಭವಗಳ | ತರುಣಿ ಸಹಿತ ಹೊರ ಹೊರಟನೆ ||೪||ಅಜಭವಾದಿಗಳರಸನಾದ | ವಿಜಯವಿಠಲನ ಧ್ಯಾನಿಪ |ನಿಜ ಸುಜ್ಞಾನವ ಕೊಡಿಸ ಬೇಕೆಂದು | ಭಜಿಪೆನೋ ಕೇಳ್ ಗುರುವರ ||೫||
ಕನ್ನಡ ಮಾತಾಡ್ಲಿಕ್ಕೆ ಬರ್ತದ?
ಸುವೀರ, ಇವತ್ತು ನಿನಗ ಧ್ರುವನ ಕತಿ ಹೇಳ್ತೀನಿ.
ಧ್ರುವನ ಕತಿ?
ಹು. ಆದ್ರ ನಿನ್ನ ಫ್ರೆಂಡ್ಸ್ ಧ್ರುವ ಅಲ್ಲ. ನಿನ್ನ ಫ್ರೆಂಡ್ ಒಬ್ಬವ ೨ ಇಯರ್ ಓಲ್ಡ್ ಧ್ರುವ ಇದ್ದಾನ ಇನ್ನೊಬ್ಬವ ೪ ಇಯರ್ ಓಲ್ಡ್ ಧ್ರುವ ಇದ್ದಾನ. ಇದು ೫ ಇಯರ್ ಓಲ್ಡ್ ಧ್ರುವನ ಕತಿ. ನಾರಾಯಣ ಧ್ರುವಗ ಒಂದು ಸ್ಟಾರ್ ಕೊಟ್ಟಿದ್ದ ಕತಿ ಇದು.
ಹೀಗೆ ಆರಂಭಿಸಿ, ಈ ರೀತಿ ವಿಚಿತ್ರವಾಗಿ ಕಂಗ್ಲೀಷಿನಲ್ಲಿ ಧ್ರುವನ ಹೇಳ್ತಾ ಇರೋವಾಗ, ಕತೆಯ ಬೇರೆ ಬೇರೆ ಘಟ್ಟಗಳಲ್ಲಿ ನನ್ನ ಮಗ ಕೇಳಿದ ಪ್ರಶ್ನೆಗಳು…
೧….ನಾರದರು ಹೇಳಿಧಂಗ ಕಾಡಿನಾಗ ಒಂದು ಕಡೆ ಧ್ರುವ ತಪಸ್ಸಿಗೆ ಕೂತ…
ಔಟ್ ಸೈಡಾ ಇನ್ ಸೈಡಾ?
೨…. ನಾರಾಯಣ ಪ್ರತ್ಯಕ್ಷ ಆಗಿ, ಧ್ರುವ ನಾನು ಬಂದಿನಿ ನೋಡು ಅಂತ ಹೇಳಿದ. ನಿನಗ ಏನು ಬೇಕು ಅಂತ ಕೇಳಿದ.
ನಾರಾಯಣಗ ಕನ್ನಡ ಮಾತಾಡ್ಲಿಕ್ಕೆ ಬರ್ತದ?
೩. … ಧ್ರುವ ನಿನ್ನ ಮ್ಯಾಲೆ ನನಗ ಭಾಳ ಖುಷಿ ಆಗೇದ. ಅದಕ ನಿನಗ ಒಂದು ನಕ್ಷತ್ರ ಕೊಡ್ತೀನಿ ಅಂತ ಧ್ರುವ ನಕ್ಷತ್ರ ಕೊಟ್ಟ.
ಬಿಗ್ ಸ್ಟಾರಾ ಸ್ಮಾಲ್ ಸ್ಟಾರಾ?
ವಿಮರ್ಶೆ
The transaction between writer and subject can easily be stage-managed for marketplace effect — moments overplayed to guide readers to tears or elation or preordained insights — and prose often takes on the weight of sentimentality, the great enemy of good writing, as J. D. Salinger put it, giving something “more tenderness than God gives to it.”
- Against the Odds, NYTimes – Review of Tracy Kidder‘s book ‘Strength in What Remains‘
ನಮ್ಮ ವಾಕ್ಪಟುಗಳು ಟೋಸ್ಟ್ ಮಾಸ್ಟರ್ಸ್ ಕ್ಲಬ್ಬಿನ ಸಭೆಗಳಲ್ಲಿನ ಒಂದು ಮುಖ್ಯ ಅಂಗ ನಿಗದಿತ ಭಾಷಣಗಳ ವಿಮರ್ಶೆ. ಭಾಷಣ ಎಷ್ಟು ಪರಿಣಾಮಕಾರಿಯಾಗಿ ಬಂತು, ಭಾಷಣಕಾರ ಹೇಗೆ ವೇದಿಕೆಯನ್ನು ಬಳಸಿಕೊಂಡ, ಧ್ವನಿಯ ಏರಿಳಿತ ಎಷ್ಟು ಪರಿಣಾಮಕಾರಿಯಾಗಿತ್ತು, ಸಭಿಕರತ್ತ ನೋಡುತ್ತ, ಅವರಲ್ಲಿ ಕೆಲವರ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡಿದನೆ ಮುಂತಾದವುಗಳನ್ನು ಗಮನಿಸಿ ಅದನ್ನು ಭಾಷಣಕಾರನಿಗೆ ತಿಳಿಸುವದೇ ಈ ವಿಮರ್ಶಾ ವಿಭಾಗದ ಮುಖ್ಯ ಉದ್ದೇಶ. ಇದು ಭಾಷಣದ ವಿಮರ್ಶೆಯಲ್ಲ, ಬದಲಿಗೆ ಭಾಷಣ ಕಲೆಯ ವಿಮರ್ಶೆ. ಭಾಷಣದ ನಿಲುವು ವಿಮರ್ಶಕನ ನಿಲುವಿಗೆ ವಿರುದ್ಧವಾಗಿದ್ದರೂ ವಿಮರ್ಶಕ ಅಲ್ಲಿ ತನ್ನ ನಿಲುವಿನ ಕುರಿತು ಮಾತನಾಡುವಂತಿಲ್ಲ. ಬದಲಿಗೆ ಭಾಷಣಕಾರ ಎಷ್ಟು ಸಮರ್ಥವಾಗಿ ತನ್ನ ನಿಲುವನ್ನು ಮಂಡಿಸಿದ, ಇನ್ನೂ ಪರಿಣಾಮಕಾರಿಯಾಗಿ ಮಂಡಿಸಬಹುದಿತ್ತೇ ಎನ್ನುವದನ್ನು ತಿಳಿಸಬಹುದಷ್ಟೇ. ಒಟ್ಟಿನಲ್ಲಿ ವಿಮರ್ಶೆಯನ್ನು ಕೇಳಿದ ಮೇಲೆ ಇನ್ನಷ್ಟು ಸಮರ್ಥವಾಗಿ ಮತ್ತೊಂದು ಭಾಷಣವನ್ನು ಮಾಡುವ ಉತ್ಸಾಹ ಭಾಷಣಕಾರನಲ್ಲಿ ತುಂಬುವ ಹಾಗಿರಬೇಕು ವಿಮರ್ಶೆ.
ಇದಕ್ಕಾಗಿ ನಾವು ಬಳಸುವ ವಿಧಾನ, sandwich ವಿಧಾನ. ಇದರಲ್ಲಿ ಭಾಷಣ ಒಳ್ಳೆಯ ಅಂಶಗಳನ್ನು ಮೊದಲು ಎತ್ತಿ ಹೇಳುವದು, ನಂತರ ಭಾಷಣ ಇನ್ನಷ್ಟು ಚನ್ನಾಗಿ ಆಗಲು ಮಾಡಿಕೊಳ್ಳಬಹುದಾದ ಬದಲಾವಣೆಗಳನ್ನು ಸೂಚಿಸುವದು ಮತ್ತು ಕೊನೆಗೆ ಮತ್ತೊಮ್ಮೆ ಭಾಷಣದ ಒಳ್ಳೆ ಅಂಶಗಳನ್ನು ಹೇಳಿ, ಕೊನೆಯದಾಗಿ ಹೇಳಿದ್ದನ್ನೆಲ್ಲ ಪುಟ್ಟದಾಗಿ ಸಂಗ್ರಹಿಸಿ ಹೇಳುವದು. ಇದಕ್ಕೆಲ್ಲ ಇರುವ ಕಾಲಾವಕಾಶ ೨ ರಿಂದ ೩ ನಿಮಿಷ.
ಮೊದಮೊದಲು ಈ ರೀತಿ ಭಾಷಣಗಳ ವಿಮರ್ಶೆಯನ್ನು ಮಾಡುವದು ಸಾಧ್ಯವಾಗುತ್ತಿರಲೇ ಇಲ್ಲ. ಬೇಡವೆಂದರೂ ವಿಮರ್ಶೆ ಭಾಷಣದ ವಿಷಯವನ್ನೇ ವಿಮರ್ಶಿಸುತ್ತಿತ್ತು. ವಿಷಯ ವಿಮರ್ಶೆ ಒಂದು ಕೊನೆಯಾದರೆ ಭಾಷಣದಲ್ಲಿ ಕಾಣದ, ಅಥವಾ ಬಹಳ ಸೂಕ್ಷ್ಮವಾಗಿ ಕಂಡ ವಿಷಯಗಳನ್ನೇ ಎತ್ತಿಕೊಂಡು ಅದನ್ನೇ ಬಹಳಷ್ಟು ಹೊಗಳುವದು/ಟೀಕಿಸುವದು, ಇನ್ನೊಂದು ಕೊನೆ. ಟೋಸ್ಟ್ಮಾಸ್ಟರ್ಸ್ ನಡೆಸುವ ವಿಮರ್ಶಾ ಸ್ಪರ್ಧೆಗಳಲ್ಲಿ ತಮ್ಮ ವಿಮರ್ಶೆಯೇ ಚನ್ನಾಗಿರಬೇಕು ಎನ್ನುವ ಹಂಬಲದಲ್ಲಿ ಈ ಎರಡನೇ ಕೊನೆಯನ್ನು ಮುಟ್ಟಿಬಿಡುವ ಸಂಭವ ಹೆಚ್ಚು. ನಾನು ನೋಡಿದ ಒಂದು ಸ್ಪರ್ಧೆಯಲ್ಲಿ ಹಾಗಾಯಿತು ಅಂತ ಅನಿಸಿತ್ತು. ಅದನ್ನು ತಪ್ಪಿಸುವದು ಹೇಗೆ ಮತ್ತು ಅದೇ ಸಮಯದಲ್ಲಿ, ಭಾಷಣದಲ್ಲಿ ಮೂಡಿದ ಒಳ್ಳೆಯ ಅಂಶಗಳನ್ನು ಎತ್ತಿ ಹಿಡಿದು, ಭಾಷಣದ ಶೈಲಿಯ ಕುಂದು ಕೊರತೆಗಳನ್ನು ಸಕಾರಾತ್ಮಕವಾಗಿ ತೋರಿಸಿಕೊಡುವದು ಹೇಗೆ ಎನ್ನುವ ಪ್ರಶ್ನೆ ನನ್ನನ್ನು ಪ್ರತೀ ಬಾರಿ ಕಾಡುತ್ತದೆ. ಹಾಗಾದಾಗಲೆಲ್ಲ ನಾನು ನೆನಪು ಮಾಡಿಕೊಳ್ಳುವದು ಈ ಮೇಲೆ ಕೊಟ್ಟ ನ್ಯೂ ಯಾರ್ಕ್ಟೈಮ್ಸಿನ ವಿಮರ್ಶೆಯೊಂದರ ಭಾಗ.
ಟ್ರೇಸಿ ಕಿಡ್ಡರ್ ಬರೆದ ಪುಸ್ತಕ ‘Strength In What Remains’ ನ ವಿಮರ್ಶೆ/ಪರಿಚಯ ಅದು. ಆ ಪುಸ್ತಕ ಬರುಂಡಿಯ ನರಮೇಧದಿಂದ ತಪ್ಪಿಸಿಕೊಂಡು ಪಾರಾಗಿ ಬಂದ ಡಿಯೋನ ಕತೆ. ಅದರಲ್ಲಿ ಬರುವ ನರಮೇಧದ ಚಿತ್ರಣವನ್ನ, ಅದನ್ನು ಎದುರಿಸಿ ಬಂದ ಡಿಯೋನ ಕತೆಯನ್ನು, ಎಲ್ಲೂ ಅತಿ ಹೆಚ್ಚಾಗಿ ಅಥವಾ ಅತಿ ಕಡಿಮೆಯಾಗಿ ಹೇಳದೇ matter of fact ಎಂಬಂತೆ ಟ್ರೇಸಿ ಕಿಡ್ಡರ್ ನಿರೂಪಿಸಿದ ಬಗೆಯ ಬಗ್ಗೆ ಆ ಮಾತನ್ನು ಹೇಳಿದ್ದಾನೆ ವಿಮರ್ಶಕ. ಆ ಪುಸ್ತಕವನ್ನು ಆಡಿಯೋ ಪುಸ್ತಕವಾಗಿ ಕೇಳಿ ಬಹಳಷ್ಟು ಪ್ರಭಾವಿತನಾದ ದಿನಗಳಲ್ಲಿ ಆ ಪುಸ್ತಕದ ಬಗ್ಗೆ ನಡೆಸಿದ ಗೂಗಲ್ ಹುಡುಕಾಟದಲ್ಲಿ ಸಿಕ್ಕ ಅಂಕಣದ ಈ ಭಾಗ ಬಹಳಷ್ಟು ಬಾರಿ ಉಪಯೋಗಕ್ಕೆ ಬಂದಿದೆ. ಇದು ಕತೆಗಾರನೊಬ್ಬ ಕತೆ ಹೇಳುವ ಕಲೆಯ ಬಗೆಗಿನ ಮಾತಾದರೂ ಇದನ್ನ ಭಾಷಣಗಳ ವಿಮರ್ಶೆಗೂ ಅನ್ವಯಿಸಬಹುದು ಅನಿಸುತ್ತದೆ ನನಗೆ
ಇತ್ತೀಚೆಗೆ ಯೂಟ್ಯೂಬಿನಲ್ಲಿ ಕೇಳಿದ ಈಶ್ವರಯ್ಯ ಅವರ ಮಾತುಗಳು ಕೂಡ ವಿಮರ್ಶೆ ಹೇಗಿರಬೇಕು, ವಿಮರ್ಶಕನಿಗೆ ಯಾವುದರ ಎಚ್ಚರವಿರಬೇಕು ಎನ್ನುವದನ್ನು ಸ್ಪಷ್ಟಗೊಳಿಸುತ್ತದೆ. ಈಶ್ವರಯ್ಯನವರ ಯಾವೊಂದು ವಿಮರ್ಶೆಯನ್ನಾಗಲೀ, ಕತೆಯನ್ನಾಗಲೀ ನಾನು ಓದಿಲ್ಲ. ಆದರೆ ಅವರನ್ನು ಸನ್ಮಾನಿಸುವ ಈ ವಿಡಿಯೋಗಳನ್ನು ಉದಯವಾಣಿಯ ಯೂಟ್ಯೂಬ್ ಚನೆಲ್ಲಿನಲ್ಲಿ ಆಕಸ್ಮಿಕವಾಗಿ ನೋಡಿದೆ. ಪ್ರತಿಯೊಬ್ಬ ವಿಮರ್ಶಕನಿಗೂ ಇವರ ಮಾತುಗಳು ದಾರಿದೀಪವಾಗಿವೆ.
ಈಶ್ವರಯ್ಯನವರು ಹೇಳುತ್ತಾರೆ, ಕಲೆ ಮತ್ತು ವಿಮರ್ಶೆಯೆಂಬುವು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ವಿಮರ್ಶೆಯೆಂದರೆ ಟೀಕೆಯಲ್ಲ, ಬಯ್ಗಳಲ್ಲ, ಅದು ಸಹೃದಯದ constructive criticism, ಅದು ಮಾರ್ಗದರ್ಶಕವಾಗಿ ಇರಬೇಕು. ವಿಮರ್ಶಕ ಯಾವತ್ತಿದ್ದರೂ ಕಲೆಯ ಹಿಂದೆ ಹೋಗುವನು, ಕಲೆಯ ಸೃಷ್ಟಿಕರ್ತನಲ್ಲ. ಕಲೆ ನಡೆದು ಬಂದ ಹಾದಿಯನ್ನು ಹೇಳಬಲ್ಲ. ಕಲೆಯ ಪರಂಪರೆಯನ್ನು ಗುರುತಿಸಿ ತಿಳಿಸಬಲ್ಲ, ತಾತ್ವಿಕವಾಗಿ ಅದು ಹೀಗೆ ಮುಂದುವರಿಯಬೇಕು ಎಂದು ಹೇಳಬಲ್ಲ, ಅಷ್ಟೆ ಎನ್ನುತ್ತಾರೆ. ವಿಮರ್ಶಕನ ಜವಾಬ್ದಾರಿಯನ್ನು, ಇತಿ ಮಿತಿಗಳನ್ನು ಇಷ್ಟು ಸ್ಪಷ್ಟವಾಗಿ ಹೇಳಿದ್ದು ಕೇಳಿ ಖುಷಿಯಾಯಿತು.
ಕೆಳಗಿನ ಯೂಟ್ಯೂಬಿನ ಲಿಂಕಿನಲ್ಲಿ ಅವರ ಮಾತುಗಳಲ್ಲೇ ಕೇಳಬಹುದು. ವಿಮರ್ಶೆಯ ಬಗೆಗಿನ ಮಾತುಗಳು ೭ ನಿಮಿಷ ೪೦ ಸೆಕೆಂಡುಗಳ ನಂತರ ಬರುತ್ತವೆ.
ಎನಗೂ ಆಣೆ ರಂಗ…
ಎಲ್ಲರಿಗೂ ಹೊಸ ವರ್ಷ ೨೦೧೨ರ ಶುಭಾಶಯಗಳು. ಹೊಸ ವರ್ಷ ಎಲ್ಲರ ಬಾಳಿನಲ್ಲಿ ಹೊಸತನ್ನು ತರಲಿ, ಬಾಳು ಬೆಳಗಲಿ, ಕನಸುಗಳು ಪೂರ್ಣವಾಗಲಿ, ಮನಸ್ಸು, ದೇಹ ಆರೋಗ್ಯಪೂರ್ಣವಾಗಿ ಬೆಳಗಲಿ.
ಹೊಸ ವರ್ಷ ಬಂತು ಅಂದರೆ ಹೊಸ ವರ್ಷದ ಹೊಸ ರೆಸಲ್ಯೂಶನ್ನುಗಳ ಸುಗ್ಗಿ. ಎಷ್ಟೋ ರೆಸಲೂಶನ್ನುಗಳು ಆರಂಭಶೂರತ್ವದಲ್ಲೇ ಕೊನೆಗೊಂಡು ವರ್ಷದ ಕೊನೆಯನ್ನೇನು, ಆ ತಿಂಗಳ ಕೊನೆಯನ್ನೂ ಕಾಣುವದಿಲ್ಲ. ಬರೀ ರೆಸಲೂಶನ್ ಮಾಡಿದರೆ ಆಯಿತೆ? ಆ ರೆಸಲೂಶನ್ನು ಎಷ್ಟು ಗಟ್ಟಿಯಾಗಿರಬೇಕು, ಅದರ ಸುತ್ತ ಮುತ್ತ, ನಮ್ಮ ಹಿಡಿತದಲ್ಲಿ ಇರೋದನ್ನ ಮತ್ತು ನಮ್ಮ ಹಿಡಿತದ ಹೊರಗೆ ಇರೋದನ್ನ ಸತತ ಪ್ರಯತ್ನದಿಂದ, ತಿಳಿದವರ ನೆರವಿನಿಂದ ನಮ್ಮ ಹಿಡಿತಕ್ಕೆ ತಂದುಕೊಂಡು ನಮ್ಮ ಗುರಿ ಸಾಧಿಸಬೇಕು. ಗಟ್ಟಿಯಾದ ರೆಸಲೂಶನ್ನು ಹೆಂಗಿರಬೇಕು ಅಂದರೆ ಪುರಂದರದಾಸರು ಈ ಪದದಲ್ಲಿ ಹೇಳ್ತಿರೋ ಹಂಗಿರಬೇಕು ಅನಿಸುತ್ತದೆ ನನಗೆ.
ಎನಗೂ ಆಣೆ ರಂಗ ನಿನಗೂ ಆಣೆ
ಎನಗೂ ನಿನಗೂ ಇಬ್ಬರಿಗೂ ಭಕ್ತರಾಣೆ
ನಿನ್ನ ಬಿಟ್ಟು ಅನ್ಯರ ಭಜಿಸಿದರೆನಗೆ ಆಣೆ ರಂಗ
ಎನ್ನ ನೀ ಕೈಬಿಟ್ಟು ಹೋದರೆ ನಿನಗೆ ಆಣೆ
ತನುಮನಧನದಲಿ ವಂಚಕನಾದರೆ ಎನಗೆ ಆಣೆ ರಂಗ
ಮನಸು ನಿನ್ನಲಿ ನಿಲಿಸದಿದ್ದರೆ ನಿನಗೆ ಆಣೆ
ಕಾಕು ಮನುಜರ ಸಂಗವ ಮಾಡಿದರೆನಗೆ ಆಣೆ ರಂಗ
ಲೌಕಿಕವ ಬಿಡಿಸದಿದ್ದರೆ ನಿನಗೆ ಆಣೆ
ಶಿಷ್ಟರ ಸಂಗ ಮಾಡದಿದ್ದರೆ ಎನಗೆ ಆಣೆ ರಂಗ
ದುಷ್ಟರ ಸಂಗವ ಬಿಡಿಸದಿದ್ದರೆ ನಿನಗೆ ಆಣೆ
ಹರಿ ನಿನ್ನಾಶ್ರಯ ಮಾಡದಿದ್ದರೆ ಎನಗೆ ಆಣೆ
ಪುರಂದರವಿಠಲ ನೀನೊಲಿಯದಿದ್ದರೆ ನಿನಗೆ ಆಣೆ
ಇದೇ ಪದವನ್ನ ನಚಿಕೇತ ಶರ್ಮ ಹಾಡುಗಾರಿಕೆಯಲ್ಲಿ ಕೇಳಬಹುದು ಯೂಟ್ಯೂಬಿನ ಈ ಕೊಂಡಿಗಳಲ್ಲಿ.
ಜೀವ ಅಸ್ವತಂತ್ರ (ಅಥವಾ ಜೀವನ ಸ್ವಾತಂತ್ರ್ಯ ಪರಮಾತ್ಮನ ಅಧೀನ ಸ್ವಾತಂತ್ರ್ಯ) ಎಂದು ಹೇಳುವ ದ್ವೈತದಲ್ಲಿ ಪ್ರಯತ್ನ ಯಾಕೆ ಬೇಕು? ಎಲ್ಲವೂ ಮೊದಲೆ ನಿರ್ಣೀತವಾಗಿದ್ದರೆ ಇಲ್ಲಿ ಜೀವರು ಯಾವುದಕ್ಕಾದರೂ ಯಾಕೆ ಪ್ರಯತ್ನಬಡಬೇಕು ಎನ್ನುವ ಪ್ರಶ್ನೆ ಬರಬಹುದು. ಅದನ್ನು ಮಧ್ವಾಚಾರ್ಯರು ಪಾಂಡವರ ವನವಾಸದಲ್ಲಿನ ಒಂದು ಪ್ರಸಂಗದ ಮೂಲಕ ವಿವರಿಸುತ್ತಾರೆ ತಮ್ಮ ಮಹಾಭಾರತ ತಾತ್ಪರ್ಯ ನಿರ್ಣಯದಲ್ಲಿ. ಅದೇ ಭಾಗವನ್ನು ಶ್ರೀ BNK ಶರ್ಮ ಅವರು ತಮ್ಮ ಪುಸ್ತಕ, ‘The Phylosophy of Madvacharya’ ದಲ್ಲಿ ಸೊಗಸಾಗಿ ವಿವರಿಸುತ್ತಾರೆ. ಅದರ ಕೆಲವು ಸಾಲುಗಳನ್ನ ಬರೆದಿಟ್ಟುಕೊಂಡಿದ್ದೆ. ಅವು ಇಲ್ಲಿ ಕೆಳಗಿವೆ,
Chapter XLIII : Freedom and Freewill in Madhva’s Philosophy :
Karma implies freedom and freedom implies a choice. But it does not explain why a particular choice is made unless the freedom itself is an expression of the innate nature of each soul.
Karma itself is the result of the distinctive nature of each soul (haTh) which is intrinsic to it (svaroopa yOgyataa). Hatha or svaroopayOgyataa and recognizable karma which is its outcome can hardly operate and bear fruit without ‘Prayatna’ or intensive conscious effort. It will thus be clear that while svaroopa yOgyataa is the basic determinant of human destiny, it lies more or less dormant until it is awakened and transmuted into karma through intensive effor. Human effort or endeavor is thus made to play the key role in making man the architect of his own future in keeping with his own basic nature.
Trivikrama Pandita makes a clear and very important statement that while anaadisvaroopa yOgyataa is the potential factor in attaining aparOksha in the end, it is possible only by zealous intensive effort in the direction (mahOtsaaha) as exemplified in the case of Indra, in the story from the Chaandogya Upanishad.
ಅವತಾರ್
ಜಾಗರಸ್ವಪ್ನಂಗಳೊಳು ವರ
ಭೋಗಿಶಯನ ಬಹುಪ್ರಕಾರ ವಿ
ಭಾಗಗೈಸಿ ನಿರಂಶಜೀವರ ಚಿಚ್ಛರೀರವನು
ಭೋಗವಿತ್ತು ಸುಷುಪ್ತಿಕಾಲದಿ
ಸಾಗರವ ನದಿ ಕೂಡುವಂತೆ ವಿ
ಯೋಗರಹಿತನು ಅಂಶಗಳ ಏಕತ್ರವೈದಿಸುವ
– ಹರಿಕಥಾಮೃತಸಾರ – ೩-೮
ಜೇಮ್ಸ್ ಕ್ಯಾಮರೂನನ ಅವತಾರ್ ಸಿನೇಮಾ ಇವತ್ತು ನೋಡಿದ್ದಾಯ್ತು, ಅದೂ ಆಕಸ್ಮಿಕವಾಗಿ. ೩ಡಿ ಸ್ಕ್ರೀನಿನಲ್ಲಿ ನೋಡಿ ಆನಂದಿಸಲಿಕ್ಕೆ ಆಗಿರಲಿಲ್ಲ. ಯಾಕೆ ನೋಡಲಿಲ್ಲ ಅವಾಗ ಅಂತನಿಸಿತು. ಮನುಷ್ಯರು ಒಂದು ಕಡೆ ವಿಶೇಷ ಪೆಟ್ಟಿಗೆಯಲ್ಲಿ ಮಲಗಿ ಇನ್ನೊಂದು ಕಡೆ ಅವತರಿಸುವದು, ಇಲ್ಲಿ ಎದ್ದಾಗ ಅಲ್ಲಿ ಮಲಗುವದು, ಅಲ್ಲಿ ಮಲಗಿದಾಗ ಇಲ್ಲಿ ಏಳುವದು ಎಲ್ಲ ನೋಡುತ್ತಿದ್ದಾಗ ಜಗನ್ನಾಥದಾಸರ ಹರಿಕಥಾಮೃತಸಾರದ ಈ ನುಡಿ ನೆನಪಾಯ್ತು.
ಕಾರ್ ಕಲಿಕೀ
‘ನಿನ್ನ ಹೆಂಡತಿಗೆ ನೀನೆ ಕಾರ್ ಕಲಿಸಲಿಕ್ಕೆ ಹೋಗಬ್ಯಾಡ. ಬರೀ ಜಗಳ ಆಗ್ತಾವ ನೋಡು.’ ಅಂತ ಭಾಳ ಮಂದಿ ಭಾಳ ಸರ್ತಿ ಹೇಳಿದ್ರು ನನಗ. ಆದ್ರ ಏನು ಮಾಡೋದು, ನೀನು ಮೊದ್ಲ ಎರಡು ಮೂರು ಸರ್ತಿ ನನಗ ಹೇಳಿ ಕೊಡೊ ತನಕ ನಾನು ಬ್ಯಾರೇದವರ ಕಡೆ ಕಾರ್ ಕಲಿಯಂಗಿಲ್ಲ ಅಂತ ಪಟ್ಟ ಹಿಡದು ಕೂತ ಹೆಂಡತಿ ಮಾತಂತೂ ಕೇಳಬೇಕಲ್ಲ. ನನಗ ಮೆಚ್ಚಿಗಿ ಅಂತ ಗೇರು ಬದ್ಲಾಯ್ಸಬೇಕಾಗೋ ಕಾರ್ ತೊಗೊಂಡಿದ್ದ ತಪ್ಪಿಗೆ ಇಷ್ಟು ದಿವ್ಸ ಕಾರ್ ಕಲೀಲಾರದೆ ಹಂಗೇ ಮ್ಯಾನೇಜ್ ಮಾಡಿದಾಕೀಗೆ ಈಗ ಮಗನ ದೆಸಿಂದ ಕಾರ್ ಕಲೀಬೇಕು ಅನ್ನೋ ಹುಮ್ಮಸ್ಸು ಬಂದದ. ಈಗ ನಾನ್ಯಾಕ ಛಾನ್ಸ್ ಬಿಡ್ಬೇಕು? ಪುಣ್ಯಕ್ಕ ಇದೇ ವ್ಯಾಳ್ಯಾಕ್ಕ ನಮ್ಮ ನಹುಷ ಇಲ್ಲೇ ಸ್ಯಾನ್ ಹೋಸೆಗೆ ಬಂದು ತಂದೊಂದು ಆಟೊಮ್ಯಾಟಿಕ್ ಕಾರು ತೊಗೊಂಡಿದ್ದು ಅನುಕೂಲ ಆಗೇದ. ನಮ್ಮ ಕಾರ್ನಾಗ ಮಗನ್ನ ಕೂಡ್ಸಿ, ಅವನ ಜೊತೀಗೆ ನಹುಷನ್ನ ಕೂಡ್ಸಿ, ಅವನ ಕಾರ್ ಒಳಗ ನಾವಿಬ್ಬರೂ ಪಾರ್ಕಿಂಗ್ ಲಾಟ್ ಸುತ್ತೋದು ನಡೀಲಿಕತ್ತದ.

ಕಾರು ಕಲಿಸೋ ಕಾಲಕ್ಕ, ನನಗ ಕಾರು ಕಲಿಸಿದ ಮ್ಯಾಥ್ಯೂಸನ ನೆನಪಾಗ್ತದ. ಭಾರತದಾಗ ಅರ್ಧಮರ್ಧ ಕಾರು ಕಲ್ತಿದ್ದೆ. ಇಲ್ಲಿಗೆ ಬಂದ ಒಂದು ಆರು ತಿಂಗಳ ಮ್ಯಾಲೆ ಕಾರು ಕಲೀಲಿಕ್ಕೆ ಶುರು ಮಾಡಿದ್ದೆ. ಅದು ಈಗ ೧೨-೧೩ ವರ್ಷ ಹಿಂದಿನ ಮಾತು. ಆದ್ರ ಅವತ್ತು ಮ್ಯಾಥ್ಯೂಸ್ ಹೇಳಿದ್ದ ೩ ವಿಚಾರ ಮಾತ್ರ ಇವತ್ತೂ ಮರತಿಲ್ಲ. ಅವಂದರ,
- ಸಿಗ್ನಲ್ಲಿನ್ಯಾಗ, ಟ್ರಾಫಿಕ್ಕಿನ್ಯಾಗ ಇನ್ನೊಂದು ಕಾರಿನ ಹಿಂದ ನಿಲ್ಲಸಬೇಕಾದ್ರ ಆ ಮುಂದಿನ ಕಾರಿನ ಹಿಂದಿನ ಘಾಲಿ ನೆಲಕ್ಕ ಮುಟ್ಟೋ ಜಾಗ ಕಾಣಸೋ ಅಷ್ಟು ದೂರದಾಗ ನಿಂದರಬೇಕು. ಅಂದರ ಅಕಸ್ಮಾತ್ ಮುಂದೇನಾದರೂ ಆಗಿ ಮುಂದಿನ ಕಾರು ಸ್ಟಕ್ ಆದ್ರ ಅಲ್ಲಿಂದ ಬಲಕ್ಕ ಹೊಳ್ಳಿಸಿಕೊಂಡು ಇನ್ನೊಂದು ಲೇನಿಗೆ ಹೋಗಲಿಕ್ಕೆ ಬರ್ತದ. ಇಲ್ಲಾ ಅಂದರ ನಾನೂ ಸ್ಟಕ್ ಆಗ್ತೀನಿ.
- ಕಾರು ಬ್ರೇಕ್ ಹಾಕಿ ನಿಲ್ಲಸೊ ಕಾಲಕ್ಕ, ಇನ್ನೇನು ನಿಂತು ಅನ್ನೋವಾಗ ಒಂಚೂರು ಬ್ರೇಕ್ ಮ್ಯಾಲಿನ ಕಾಲನ ಸಡ್ಲ ಮಾಡ್ಬೇಕು. ಅಂದರ ಬ್ರೇಕ್ ಹಾಕಿದಾಗ ಬರೋ ಜರ್ಕ್ ಒಂಚೂರು ಕಮ್ಮಿ ಆಗ್ತದ.
- ಎಡಕ್ಕ ಅಥವಾ ಬಲಕ್ಕ ಹೊರಳಸೋ ಮೊದ್ಲ ಬ್ಲೈಂಡ್ ಸ್ಪಾಟ್ ನೋಡ್ಬೇಕು ಅಂತ ಎಲ್ಲಾರೂ ಹೇಳ್ತಾರ. ಅದನ್ನ ಮ್ಯಾಥ್ಯೂಸ್ ಪ್ರ್ಯಾಕ್ಟಿಕಲ್ ಆಗಿ ಮಾಡಿ ತೋರ್ಸಿದ್ದ. ಒಂದು ಕಡೆ ಕಾರು ಪಾರ್ಕ್ ಮಾಡಿ ನನಗ ಹೇಳಿದ. ನೀನು ಡ್ರೈವರ ಪಕ್ಕದ ಕನಡಿ ಮತ್ತ ಹಿಂದಿಂದು ತೋರ್ಸೋ ಕನ್ನಡಿ ಎರಡನ್ನೂ ಅವಾಗಾವಾಗ ನೋಡ್ತಿರು. ನಾನು ಹಿಂದಿನಿಂದ ನಡಕೋತ ಬರ್ತೀನಿ. ಮೊದ್ಲ ಕನ್ನಡಿ ಒಳಗ ಕಾಣಸ್ತಿರ್ತೀನಿ, ಹಂಗ ಮುಂದ ಬರ್ತಾ ಬರ್ತಾ ಒಂದು ಕಡೆ ನಾನು ಯಾವ ಕನ್ನಡಿ ಒಳಗೂ ಕಾಣ್ಸಂಗಿಲ್ಲ. ಅದೇ ನಿನ್ನ ಬ್ಲೈಂಡ್ ಸ್ಪಾಟು. ಅವಾಗ ಸ್ವಲ್ಪ ತಲಿ ಬಗ್ಸಿ ಎಡ ಭುಜದ ಮ್ಯಾಲಿಂದ ಎಡಕ್ಕ ಹೊರಗ ನೋಡಿದ್ರ ಕಾಣಿಸ್ತೀನಿ ಅಂತ. ಅದರ ಹಂಗ ಮಾಡಿ ತೋರ್ಸಿದ.
ಇವು ಮೂರು ಭಾಳ ಛೊಲೊ ಹೇಳಿದ್ದ. ಉಳಧಂಗ ಎಲ್ಲಾ ಛೊಲೊನೇ ಕಲ್ಸಿದ್ದ. ಈ ಇಂಡಿಕೇಟರ್ ಹಾಕೋದು ಮಾತ್ರ ಭಾಳ ಕನ್ಫ್ಯೂಸ್ ಆಗ್ತಿತ್ತು. ಸ್ಟೀರಿಂಗ್ ವ್ಹೀಲಿನ ಎಡಗಡೆ ಇರೋದನ್ನ ಮ್ಯಾಲೆ ಮಾಡಿದ್ರ ಬಲಗಡೆ ಇಂಡಿಕೇಟರು ಮತ್ತ ಕೆಳಗ ಮಾಡಿದ್ರ ಎಡಗಡೆ ಇಂಡಿಕೇಟರು ಅಂತ ಹೇಳಿದ್ದು ತಲೀಗೆ ಇಳ್ದಿದ್ದಿಲ್ಲ. ಯಾವಾಗ್ಲೂ ಗೊಂದಲ ಆಗೋದು ಮಗಂದು. ಒಂದು ಸರ್ತಿ ಅಂತು ಇಂಡಿಕೇಟರ್ ಬದ್ಲು ವೈಪರ್ ಚಾಲು ಮಾಡಿ ಬಯ್ಸಿಕೊಂಡಿದ್ದೆ. ಕಡೀಕೆ ಶಾಂತ ಮನಸ್ಸಿಂದ ವಿಚಾರ ಮಾಡಿದಾಗ ನನಗ ತಿಳೀತು, ಸ್ಟೀರಿಂಗ್ ವ್ಹೀಲು ಯಾವ ಕಡೆ ತಿರಗಸಬೇಕಾಗೇದೋ ಇಂಡಿಕೇಟರ್ರೂ ಅದೇ ದಿಕ್ಕಿನಾಗ ಹೋಗಬೇಕು ಮತ್ತ ಎಡಗೈ ಆ ಕೆಲಸ ಮಾಡಬೇಕು ಅಂತ. ಅದಾದ ಮ್ಯಾಲೆ ನಿರುಮ್ಮಳ ಆತು.
ಅಂತೂ ನನ್ನ ಹೆಂಡತಿ ಕಾರ್ ಕಲಿಕೀ ನೆಪದಾಗ ನನ್ನ ಕಾರ್ ಕಲಿಕೀ ನೆನಪಾತು. ಪಾರ್ಕಿಂಗ್ ಲಾಟಿನೊಳಗ ಛೋಲೊ ಓಡಸ್ಲಿಕತ್ತಾಳ ಅನಸಿದ್ದಕ್ಕ ರೋಡ್ ಮ್ಯಾಲೆ ಹೋಗ್ತಿ ಏನು ಅಂತ ಕೇಳಿದ್ರ, ‘Not with you. You are not a good instructor!’ ಅಂತ ಅನ್ನಿಸಿಕೊಂಡಿದ್ದೂ ಆಯಿತು. ಯಾಕ ನಾನೇನು ಅಷ್ಟು ಬಯ್ದೀನೇನು ಅಂತ ಅಂದರ ಇಲ್ಲ ನಿನ್ನ ಹತ್ರ ಕಾಲಾಗ ಬ್ರೇಕ್ ಇಲ್ಲ ಅನ್ನೋ ಸಮಝಾಯ್ಸಿ ಬ್ಯಾರೆ ಬಂತು. ಇನ್ನ ಮ್ಯಾಲೆ ಕಾರು ಕಲಿಸೋವ್ರ ಹತ್ರ ಹೋಗಲಿಕ್ಕೆ ರೆಡಿ ಆಗ್ಯಾಳ ಹಂಗಾರ!
(ಇಲ್ಲೆ ಬರೆಯೋ ಕಲ್ಕ ಎಡಕ್ಕ, ಬಲಕ್ಕ ಎಲ್ಲಾ ಹೇಳಿದ್ದು ಅಮೇರಿಕಾದಾಗಿನ ರಸ್ತೆ ಬಲಗಡೆ ಡ್ರೈವಿಂಗ್ ಪದ್ಧತಿ ಪ್ರಕಾರನ ಮತ್ತ!)
(ನನ್ನ ಮ್ಯಾನ್ಯುವಲ್ ಕಾರು ಓಡ್ಸೋ ಕಾಲಕ್ಕ, ಅವುಗಳ ಸ್ಟೀರಿಂಗ್ ವ್ಹೀಲ್ ಹಿಡ್ದಾಗ ಆದ ಜ್ಞಾನೋದಯದ ಪರಿಣಾಮದಿಂದ ಎರಡು ಕವನ(?) ಬರ್ದಿದ್ದೆ ಭಾಳ ಹಿಂದ, ಇಲ್ಲೆ ಮತ್ತ ಇಲ್ಲೆ ಅವ ಃ-) )
(ಚಿತ್ರಃ ನನ್ನ ಕಾರ್ ಕ್ರೇಝಿ ಮಗನವು, ನಾನೇ ಯಾವಾಗ ಯಾವಾಗೋ ತಗದ ಚಿತ್ರಗಳ ಕೊಲ್ಯಾಜು)
ದಧೀಭಾಂಡ
ಅಜ್ಜಾ, ಏಳಜ್ಜ ಮೇಲೆ. ಒಳಗೆ ಗಾಳಿ ಇಲ್ಲ, ಉಸಿರು ಕಟ್ತಾ ಇದೆ. ಬೇಗ ಮೇಲೆ ಏಳು..
…
ಯಾಕಜ್ಜ ಏನು ಮಾತಾಡ್ತಿಲ್ಲ? ಸಿಟ್ಟಿಂದ ಬೆನ್ನಟ್ಟಿ ಬಂದ ನನ್ನಮ್ಮ ನನ್ನ ಹೆಸರು ಕೂಗ್ತಾ ಬಂದದ್ದು ಕೇಳಿಸ್ತು. ನಾನು ಆ ಕಡೆ ಹೋದೆ ಅಂತ ನೀನು ಅವಳಿಗೆ ಹೇಳಿದ್ದೂ ಕೇಳಿಸ್ತು. ಈಗ ಅಮ್ಮನ ಧ್ವನಿನೂ ಕೇಳಿಸ್ತಾ ಇಲ್ಲ. ಹಂಗಾರೆ ಅಮ್ಮ ಆಗ್ಲೆ ಭಾಳ ದೂರ ಹೋಗಿರ್ಬೇಕು. ನನ್ನ ಹೊರಗ್ಬಿಡು ಈಗ. ನಾನು ಈ ಕಡೆ ಹೋಗ್ತೀನಿ, ಅಮ್ಮನ ಕೈಗೆ ಇನ್ನೊಂದು ಸ್ವಲ್ಪ ಹೊತ್ತು ಸಿಗಬಾರದು ನಾನು.
….
ಅಜ್ಜಾ, ನಿಜವಾಗ್ಲೂ ಉಸಿರಾಡ್ಸೋಕಾಗ್ತಾ ಇಲ್ಲ. ನಿನ್ನ ನೋಡಿದ್ರೆ ಒಳ್ಳೆವ್ನ ಥರ ಕಾಣಿಸ್ದೆ. ಎಂದೂ ಕಂಡಿರಲಿಲ್ಲ ಅಮ್ಮನ ಈ ಸಿಟ್ನ. ಹಿಡ್ದು ನಾಕು ತದಕೇ ಬಿಡ್ತಾಳೆ ಅಂತ ಕೈಗೆ ಸಿಗದೇ ಓಡಿ ಬರ್ತಿದ್ದೆ. ದಾರೀಲಿ ನೀನು ಮೊಸರಿನ ದೊಡ್ಡ ಪಾತ್ರೆ ಇಟ್ಕೊಂಡು ಕೂತ್ಕೊಂಡಿದ್ದೆ. ಒಳ್ಳೇವ್ನು ನೀನು ಅಂತ ಅಂದ್ಕೊಂಡೆ, ಅಮ್ಮನ ಕೈಲಿ ತಪ್ಪಿಸ್ಕೋಳ್ಳೋಕೆ ನಿನ್ನ ಪಾತ್ರೆ ಒಳಗೆ ಕೂತ್ಕೋತೀನಿ ಅಂದೆ. ನೀನು ಕೆಟ್ಟೋನ್ ಥರ ಕಾಣಿಸ್ಲೇ ಇಲ್ಲ. ಈಗ್ಯಾಕೆ ನನ್ನ ಹೊರಗೆ ಬಿಡ್ತಾನೇ ಇಲ್ಲ? ಬಿಡು ಅಜ್ಜಾ ನನ್ನ.
….
ಅಜ್ಜಾ, ಬಿಡು ಅಜ್ಜಾ. ಉಸಿರು ಕಟ್ತಾ ಇದೆ.. ಊ ಊ ..
ಪುಟ್ಟಾ ನನಗೋಸ್ಕರ ಒಂದು ಮಾತು ಹೇಳ್ತೀಯಾ? ಅಂದರೆ ಬಿಟ್ಟು ಬಿಡ್ತೀನಿ.
ಏನು ಹೇಳ್ಬೇಕು ಅಜ್ಜಾ?
‘ನಿನಗೆ ಮುಕ್ತಿ ಕೊಟ್ಟಿದೀನಿ’ ಅಂತ ಹೇಳಿಬಿಡು, ಬಿಟ್ಟು ಬಿಡ್ತೀನಿ.
ನಾನು ಪುಟ್ಟ ಮಗು ಅಜ್ಜಾ, ನಂಗದೆಲ್ಲ ಗೊತ್ತಾಗೋದಿಲ್ಲ. ನನ್ನ ಬಿಟ್ಟು ಬಿಡು ಅಜ್ಜಾ.
ಬಿಡೋದಕ್ಕೆ ಹಿಡ್ದಿಲ್ಲ ಕೃಷ್ಣ ನಿನ್ನ. ನೀನು ಬರೀ ಪುಟ್ಟ ಮಗೂನಾ? ನಂಗೆ ಮುಕ್ತಿ ಕೊಟ್ಟೆ ಅಂತ ಹೇಳಿಬಿಡು, ಬಿಟ್ಟುಬಿಡ್ತೀನಿ.
ಅಜ್ಜಾ ಬಿಟ್ಬಿಡು ಅಜ್ಜಾ, ನಿನ್ನ ಕೈಯಲ್ಲಿ ಸಿಕ್ಕಿ ಹಾಕ್ಕೊಳ್ಳೊ ಬದ್ಲು ಅಮ್ಮನ ಕೈಗೆ ಸಿಕ್ಕಿದ್ರೆ ಚನ್ನಾಗಿತ್ತು! ಬಿಟ್ಬಿಡು ಅಜ್ಜಾ..
….
ಅಜ್ಜಾ..
….
ಆಯ್ತು ಅಜ್ಜಾ, ನಿಂಗೆ ಮುಕ್ತಿ ಕೊಟ್ಟಿದೀನಿ, ಬಿಟ್ಬಿಡು ಅಜ್ಜಾ.
….
ಹೇಳಿದ್ನಲ್ಲ ಅಜ್ಜಾ, ಇನ್ನೂ ಯಾಕೇ ಏಳ್ತಿಲ್ಲ?
ಮತ್ತೆ ನನ್ನ ಹೆಂಡತಿ ಮಕ್ಕಳು ನನ್ನ ಜವಾಬ್ದಾರಿ ಅಲ್ಲವಾ? ಅವರಿಗೂ ಮುಕ್ತಿ ಕೊಟ್ಟೆ ಅಂತ ಹೇಳ್ಬಿಡಪ್ಪ!
ಅಯ್ಯೋ ಇದೇನಾಟ ಅಜ್ಜಾ ನಿಂದು? ಆಯ್ತು ಅವರಿಗೂ ಮುಕ್ತಿ ಕೊಟ್ಟೆ. ಈಗ್ಲಾದ್ರೋ ಏಳು ಅಜ್ಜಾ.
ನನ್ನ ಹಳ್ಳಿಗೇ ನಾನೇ ಮುಖಂಡ, ನನ್ನ ಹಳ್ಳಿ ಜನ ಎಲ್ಲಾ ನನ್ನ ಜವಾಬ್ದಾರೀನೇ ಅಲ್ವಾ? ಅವರಿಗೂ ಮುಕ್ತಿ ಕೊಟ್ಟೆ ಅಂತ ಹೇಳ್ಬಿಡು ಮತ್ತೆ.
ನಂದಿಲ್ಲಿ ಉಸಿರು ಕಟ್ತಾ ಇದೆ.. ಆಯಿತು ಅವರಿಗೂ ಮುಕ್ತಿ ಕೊಟ್ಟಿದೀನಿ. ಬಿಟ್ಬಿಡು ಅಜ್ಜಾ..
ಎಷ್ಟೊಳ್ಳೇತಾ ಕೃಷ್ಣ ನೀನು. ಇನ್ನೇನೂ ಇಲ್ಲ, ನಿನ್ನ ಇಷ್ಟೊತ್ತು ಇಟ್ಕೊಂಡು ನನ್ನ ಕೆಲಸ ಮಾಡಿಕೊಟ್ತಲ್ಲ ಈ ಮೊಸರಿನ ಪಾತ್ರೆ, ಇದಕ್ಕೂ ಮುಕ್ತಿ ಕೊಟ್ಟೆ ಅಂತ ಹೇಳ್ಬಿಡು, ಬಿಟ್ಟೇ ಬಿಟ್ಟೆ.
ಆಯ್ತು ಅಜ್ಜಾ ಈ ಮೊಸರಿನ ಪಾತ್ರೆಗೂ ಮುಕ್ತಿ ಕೊಟ್ಟೆ.. ನನ್ನ ಬಿಟ್ಬಿಡು.
ಬಾರೋ ನನ್ನ ಕೃಷ್ಣ, ಒಡೆಯಾ. ಮತ್ತೆ ನೀನು ಬರ್ತೀಯಾ, ಆವಾಗ್ಲೇ ನಾನೂ ಬರ್ತೀನಿ. ಆಗ ಕೊಡ್ತೀನಿ ಅಂದಿದ್ದೆ. ಇವತ್ತು ಕೊಟ್ಟೆ ಬಿಟ್ಯಲ್ಲ. ಧನ್ಯನಾದೆ ಕೃಷ್ಣ.

ಭಾಗವತದ ದಧೀಭಾಂಡನ ಕತೆಯಂತೆ ಇದು. ರಾಮಾವತಾರ ಕಾಲಕ್ಕೆ ಗುಹನಾಗಿ ರಾಮನಿಗೆ ಅಪಾರ ಸಹಾಯ ಮಾಡಿದಾತ. ಮುಕ್ತಿ ಕೊಡು ರಾಮ ಅಂತ ರಾಮನನ್ನು ಕೇಳಿದಾತ. ಅದು ಈಗಲ್ಲ, ಮುಂದೆ ನೀನು ಬರ್ತೀಯಾ, ನಾನೂ ಬರ್ತೀನಿ. ಆಗ ಕೊಡ್ತೀನಿ ಅನ್ನುತ್ತಾನಂತೆ ರಾಮ. ಅವನೇ ಗೋಕುಲದ ಬೀದಿಯಲ್ಲಿ ಕುಳಿತುಕೊಂಡಿರುತ್ತಾನೆ. ಸಿಟ್ಟಿನಿಂದ ಬೆನ್ನಟ್ಟಿ ಬರುತ್ತಿರುವ ಅಮ್ಮ ಯಶೋದೆಯಿಂದ ತಪ್ಪಿಸಿಕೊಳ್ಳಲು ಕೃಷ್ಣ ಅವನ ಆಶ್ರಯವನ್ನೇ ಪಡೆಯುತ್ತಾನಂತೆ.
ದಧೀಭಾಂಡನ ಈ ಕತೆ ಕೇಳಿರಲಿಲ್ಲ. ನಿನ್ನೆ ಅರಳುಮಲ್ಲಿಗೆ ಪಾರ್ಥಸಾರಥಿ ಅವರ ಭಾಗವತ ಪ್ರವಚನದ ಮಂಗಳದಲ್ಲಿ ಮೊದಲ ಬಾರಿ ಕೇಳಿದೆ. ತಟ್ಟನೆ ಎದೆಗೆ ತಟ್ಟಿ, ವಿಚಾರ ಮಾಡಿದಂತೆ ಬಗೆ ಬಗೆಯಲ್ಲಿ ಬೆರಗು ಮೂಡಿಸಿದ ಕತೆ. ಮುಕ್ತಿಯನ್ನು ಕೇಳುವವ ಹೊರಗಿದ್ದಾನೆ, ಕೊಡುವವ ಒಳಗಿದ್ದಾನೆ. ಅಷ್ಟೇ ಅಲ್ಲ, ಸ್ವತಃ ತಾನೇ ಬೇಕಾಗಿ ಒಳಗೆ ಹೋಗಿದ್ದಾನೆ. ಅಮ್ಮನ್ನ ಸಿಟ್ಟಿಗೆಬ್ಬಿಸಿದ್ದು, ಅವಳಟ್ಟಿಸಿಕೊಂಡು ಬಂದದ್ದು, ಎಲ್ಲ ಇವನಿಗಾಗಿಯೆ? ಮುಕ್ತಿಯನ್ನೇ ಕೊಡುವವಗೆ ದಧಿಭಾಂಡದ ಸೆರೆಯೆ?
ಉತ್ಥಾನ ದ್ವಾದಶಿ, ತುಳಸಿ ಲಗ್ನದ ದಿವಸಕ್ಕೊಂದು ಭಾಗವತದ ಕೃಷ್ಣನ ಕತೆ, ರಾಮನ ಕತೆಯ ಸ್ಮರಣೆಯೊಂದಿಗೆ.
(ಕತೆಯ ತಿರುಳು, ಅರಳುಮಲ್ಲಿಗೆ ಅವರ ಪ್ರವಚನದಲ್ಲಿ ಕೇಳಿದ್ದು. ಇಲ್ಲಿ ಬರೆದದ್ದು ಅವರ ಪ್ರವಚನದ ಯಥಾವತ್ ಅಕ್ಷರ ರೂಪವಲ್ಲ. ನನ್ನ ನೆನಪಿನಲ್ಲಿ ಉಳಿದದ್ದನ್ನ, ನನ್ನ ವಾಕ್ಯಗಳಲ್ಲಿ ಇಲ್ಲಿ ಬರೆದಿದ್ದೇನೆ)
ನವೆಂಬರ್ ೧
ರಬೀಂದ್ರನಾಥ ಟಾಗೋರರ ಈ ಪದ್ಯವನ್ನು ಮೊದಲೊಮ್ಮೆ ಅನುವಾದ ಮಾಡಲಿಕ್ಕೆ ಪ್ರಯತ್ನಿಸಿದ್ದೆ. ಇತ್ತೀಚೆಗೆ ಮತ್ತೆ ನನ್ನದೇ ಅನುವಾದವನ್ನು ನೋಡಿದಾಗ ಇನ್ನೊಂದು ಪ್ರಯತ್ನ ಮಾಡಬೇಕು ಅನಿಸಿದ್ದಕ್ಕೆ ಮತ್ತೆ ಮಾಡಿ ಹಾಗೆ ಇಟ್ಟುಕೊಂಡಿದ್ದೆ. ಇವತ್ತು ಕನ್ನಡ ರಾಜ್ಯೋತ್ಸವಕ್ಕೆ ಏನನ್ನಾದರೂ ಬರೆಯಬೇಕು ಅಂದುಕೊಳ್ಳುತ್ತಾ ಹಾಗೇ ನೋಡುವಾಗ ಇದು ಕಣ್ಣಿಗೆ ಬಿತ್ತು. ರಾಜ್ಯೋತ್ಸವದ ಸಂದರ್ಭದಲ್ಲಿ ಇಂದಿನ ಕನ್ನಡ, ಕನ್ನಡಿಗರ ಪರಿಸ್ಥಿತಿ ಇತ್ಯಾದಿಗಳ ಕುರಿತು ಕನ್ನಡ ಪತ್ರಿಕೆಗಳಲ್ಲಿ, ಬ್ಲಾಗುಗಳಲ್ಲಿ ಈಗಷ್ಟೇ ಓದಿದ ಕೆಲವು ಲೇಖನಗಳ ಹಿನ್ನೆಲೆಯಲ್ಲಿ ನೋಡಿದಾಗ, ಈ ಪದ್ಯದ ಆಶಯ ರಾಜ್ಯೋತ್ಸವದ ಸಂದರ್ಭಕ್ಕೂ ಸರಿಯಾಗಿದೆ ಅನಿಸಿತು.
ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು
ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ
ಮನಕಂಜಿಕೆಯೆ ಇರದಲ್ಲಿ, ತಲೆಯೆತ್ತಿ ಇರುವಲ್ಲಿ
ಅರಿವು ತೆರೆದಿರುವಲ್ಲಿ
ಮನೆಮನೆಯ ಕಿರುಗೋಡೆ ಜಗವೊಡೆಯದಿರುವಲ್ಲಿ
ನನ್ನಿಯಾಳದ ನುಡಿಯನ್ನೆ ಆಡುವಲ್ಲಿ
ದಣಿವಿರದ ಹೆಣಗಾಟ ಪರಿಪೂರ್ಣತೆಗೆ ಕೈಚಾಚುವಲ್ಲಿ
ನಿರ್ಜೀವ ನಡವಳಿಕೆಗಳ ಮಳಲು ತಿಳವಿನ ತೊರೆ ಬತ್ತಿಸಿರದಲ್ಲಿ
ಎಡೆ ಬಿಡದೆ ಬೆಳೆಯುವ ವಿಚಾರಕಾರ್ಯಗಳಲ್ಲಿ ನೀ ಮನವ ಮುನ್ನಡೆಸುವಲ್ಲಿ
ಸ್ವಾತಂತ್ರ್ಯದ ಆ ಸ್ವರ್ಗದಲ್ಲಿ, ತಂದೆ, ನನ್ನ ನಾಡು ಕಣ್ತೆರೆಯಲಿ
ಹ್ಯಾಪಿ ಹ್ಯಾಲೋವೀನ್
ಇಲ್ಲಿ ಅಮೇರಿಕಕ್ಕೆ ಬರುವದಿಕ್ಕಿಂತಲೂ ಎಷ್ಟೋ ಮೊದಲು ಓದಿ ಆಶ್ಚರ್ಯಪಟ್ಟ ವಿಷಯಗಳು ಎರಡು. ಕಾಲಕಾಲಕ್ಕೆ ಹತ್ತಾರು ಅಡಿ ಎತ್ತರಕ್ಕೆ ಚಿಮ್ಮುವ ಯೆಲ್ಲೋಸ್ಟೋನಿನ ಬಿಸಿನೀರ ಬುಗ್ಗೆಗಳ ಸುಧಾ ಬರಹ ಒಂದು. ಇನ್ನೊಂದು ಹ್ಯಾಲೋವೀನ್ ಎಂಬೋ ಭೂತಗಳ ಹಬ್ಬದ ವಿಚಾರ. ಯೆಲ್ಲೋಸ್ಟೋನಿನ ವಿಚಾರ ಸುಧಾದಲ್ಲಿ ಮುಖಪುಟ ಲೇಖನವಾಗಿತ್ತು. ಹ್ಯಾಲೋವೀನ್ ಬಗ್ಗೆ ಎಲ್ಲಿ ಓದಿದ್ದೆ, ನೆನಪಿಲ್ಲ.
ಈ ಬಾರಿಯ ಹ್ಯಾಲೋವೀನಿನಲ್ಲಿ ನನ್ನ ಮಗ ಬಜ್ ಲೈಟ್ ಯೀಯರನ ವೇಷ ತೊಟ್ಟು ಟ್ರಿಕ್-ಅರ್-ಟ್ರೀಟ್ ಅಂತ ಹೊರಟಿದ್ದಾನೆ. ನಿನ್ನೆ ಅವನೊಟ್ಟಿಗೆ ಒಂದು ಕುಂಬಳಕಾಯಿ ಕೆತ್ತಿ ಜ್ಯಾಕ್-ಓ-ಲ್ಯಾಂಟರ್ನ್ ಮಾಡಿದ್ದಾಯಿತು. ಕೆಲವು ವಾರಗಳ ಹಿಂದೆ ಒಂದು ಪಂಪ್ಕಿನ್ ಪ್ಯಾಚಿಗೂ ಹೋಗಿದ್ದೆವು. ಎಲ್ಲ ಕಡೆ ಖುಷಿಯಿಂದ ಓಡಾಡುವ ಮಗನ್ನ, ಅವನ ಗೆಳೆಯ/ಗೆಳತಿಯರನ್ನ ಕಾಣುವದು ನಮ್ಮ ಖುಷಿ ಃ-)
ಹ್ಯಾಲೋವೀನಿನ ಟ್ರಿಕ್-ಅರ್-ಟ್ರೀಟ್ ಒಂದು ವಿಚಿತ್ರ. ಕೆಲವು ವರ್ಷಗಳ ಕೆಳಗೆ ಹ್ಯಾಲೋವೀನಿನ ಸಂಜೆ ನಾನು ಮನೆಯಲ್ಲಿ ಇಲ್ಲದೇ ಇದ್ದಾಗ, ತೆರೆದಿಟ್ಟಿದ್ದ ಕಿಟಕಿ ನೋಡಿ, ಅದರ ಮೆಶ್ ಹರಿದು ಒಳಬಂದ ಭೂಪನೊಬ್ಬ ಒಂದಷ್ಟು ಚಿಲ್ಲರೆ ಹೊತ್ತೊಯ್ಯುವಲ್ಲಿ ತನ್ನ ಟ್ರಿಕ್ ಮೆರೆಸಿದ್ದ. ಈ ವರ್ಷ ಒಬ್ಬಳು ‘ಐ ಬ್ರೋ ಥ್ರೆಡಿಂಗ್’ ಮಾಡಿಸಿಕೊಳ್ಳಲಿಕ್ಕೆ ನಮಗೆ ಫೋನ್ ಮಾಡಿ ಅಂತ ಜಾಹೀರಾತಿನ ಚೀಟಿ ಕೊಟ್ಟು ಹೋಗಿದ್ದಾಳೆ! ಎಲುಬಿನ ಹಂದರದಂತಹ ವೇಷ ತೊಟ್ಟು ಬಂದವನೊಬ್ಬನ ವೇಷ ಇಷ್ಟ ಆಯ್ತು ಅಂತ ಅವನ್ನ ಕೇಳಿ ಫೋಟೊ ತಕ್ಕೊಂಡೆ. ಎಲ್ಲಕ್ಕಿಂತ ಇಷ್ಟ ಆಗೋದು ಪುಟ್ಟ ಪುಟ್ಟ ಪುಟಾಣಿಗಳ ಮುದ್ದು ವೇಷ.
ಬಾಗಿಲು ಬಡೀತಾನೇ ಇದ್ದಾರೆ, ತಂದಿಟ್ಟಿದ್ದ ಕ್ಯಾಂಡಿ ಖಾಲಿ ಆಗ್ತಾ ಬಂತು, ನಾನು ಇದ್ದೂ ಇಲ್ಲ ಅನ್ನೋ ಟ್ರಿಕ್ ತೋರಿಸ್ಬೇಕಾಗುತ್ತೆ!
ಹ್ಯಾಪಿ ಹ್ಯಾಲೋವೀನ್ ಃ-)











